Islamabad: ಪಾಕಿಸ್ತಾನದ ನೀರನ್ನು ಕಸಿದುಕೊಳ್ಳಲು ಭಾರತ ಪ್ರಯತ್ನಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಎಚ್ಚರಿಸಿದ್ದಾರೆ. ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಬೆದರಿಕೆಯ ನಂತರ, ಶೆಹಬಾಜ್ ಕೂಡ ಭಾರತ ವಿರುದ್ಧ ಕಿಡಿಕಾರಿದ್ದಾರೆ.
ಭಾರತವು 1960ರ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ್ದಕ್ಕೆ ಪಾಕಿಸ್ತಾನ ಕೋಪಗೊಂಡಿದೆ. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸಿಂಧೂ ಒಪ್ಪಂದ ಸ್ಥಗಿತವೂ ಅದರಲ್ಲಿ ಒಂದು.
ಷರೀಫ್, “ಭಾರತ ಒಂದು ಹನಿ ನೀರನ್ನೂ ಕಸಿದುಕೊಳ್ಳಲು ಸಾಧ್ಯವಿಲ್ಲ, ಪ್ರಯತ್ನಿಸಿದರೆ ಗಟ್ಟಿ ಪ್ರತಿಕ್ರಿಯೆ ಸಿಗುತ್ತದೆ” ಎಂದು ಎಚ್ಚರಿಸಿದರು. ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡ, “ಸಿಂಧೂ ಒಪ್ಪಂದ ಸ್ಥಗಿತಗೊಳಿಸುವುದು ಸಿಂಧೂ ಕಣಿವೆ ನಾಗರಿಕತೆಯ ಮೇಲಿನ ದಾಳಿ” ಎಂದು ಹೇಳಿ, ಯುದ್ಧ ಬಂದರೂ ಪಾಕಿಸ್ತಾನ ಹಿಂದೆ ಸರಿಯುವುದಿಲ್ಲ ಎಂದರು.
ಸೇನಾ ಮುಖ್ಯಸ್ಥ ಮುನೀರ್, “ಭಾರತ ಅಣೆಕಟ್ಟು ನಿರ್ಮಿಸಿ ನೀರು ತಡೆದರೆ, ಕ್ಷಿಪಣಿಗಳಿಂದ ಧ್ವಂಸ ಮಾಡುತ್ತೇವೆ” ಎಂದರೆ, ರಕ್ಷಣಾ ಸಚಿವ ಖವಾಜಾ ಆಸಿಫ್, “ಮುಂದಿನ ಯುದ್ಧ ಗಡಿಯಲ್ಲಿ ಅಲ್ಲ, ಭಾರತದೊಳಗೆ ನಡೆಯುತ್ತದೆ” ಎಂದು ಬೆದರಿಕೆ ಹಾಕಿದರು.
ಜಮ್ಮು-ಕಾಶ್ಮೀರದ ಚೆನಾಬ್ ನದಿಯಲ್ಲಿ ಭಾರತ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರೀಯ ಜಲವಿದ್ಯುತ್ ಯೋಜನೆ ಪಾಕಿಸ್ತಾನಕ್ಕೆ ಆತಂಕ ತಂದಿದೆ. ಇದರ ಪರಿಣಾಮ ಕೃಷಿ, ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆ ಮೇಲೆ ಬೀಳಬಹುದು ಎಂದು ಪಾಕಿಸ್ತಾನ ಭಯಪಡುತ್ತಿದೆ. ಆದರೆ ಭಾರತ, “ಈ ಯೋಜನೆ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದ್ದು, ನಮ್ಮ ನ್ಯಾಯವ್ಯಾಪ್ತಿಯಲ್ಲಿದೆ” ಎಂದು ಸ್ಪಷ್ಟಪಡಿಸಿದೆ.