London: ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ (Lord Swaraj Paul-94) ಅವರು ಗುರುವಾರ ಸಂಜೆ ಲಂಡನ್ನಲ್ಲಿ ನಿಧನರಾದರು. ಇತ್ತೀಚೆಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಕ್ಯಾಪರೊ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಂಸ್ಥಾಪಕರಾದ ಲಾರ್ಡ್ ಪಾಲ್ ಪಂಜಾಬಿನ ಜಲಂಧರ್ ನಲ್ಲಿ ಜನಿಸಿದರು. 1960ರ ದಶಕದಲ್ಲಿ ತಮ್ಮ ಮಗಳು ಅಂಬಿಕಾ ಅವರ ಕ್ಯಾನ್ಸರ್ ಚಿಕಿತ್ಸೆಗೆ ಯುಕೆಗೆ ತೆರಳಿದ್ದರು. ಆದರೆ ಅಂಬಿಕಾ ನಾಲ್ಕು ವಯಸ್ಸಿನಲ್ಲೇ ಮೃತಪಟ್ಟ ನಂತರ, ಅವರು ಅಂಬಿಕಾ ಪಾಲ್ ಫೌಂಡೇಶನ್ ಸ್ಥಾಪಿಸಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ದೇಣಿಗೆ ನೀಡಲು ಪ್ರಾರಂಭಿಸಿದರು.
2015ರಲ್ಲಿ ಮಗ ಅಂಗದ್ ಪಾಲ್ ಹಾಗೂ 2022ರಲ್ಲಿ ಪತ್ನಿ ಅರುಣಾ ಅವರ ನಿಧನದ ನಂತರವೂ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದರು. 2023ರಲ್ಲಿ ಲಂಡನ್ನ ಇಂಡಿಯನ್ ಜಿಮ್ಖಾನಾ ಕ್ಲಬ್ನಲ್ಲಿ ಪತ್ನಿಯ ನೆನಪಿಗಾಗಿ ಲೇಡಿ ಅರುಣಾ ಸ್ವರಾಜ್ ಪಾಲ್ ಹಾಲ್ ಉದ್ಘಾಟಿಸಿದ್ದರು.
2025ರ “ಸಂಡೇ ಟೈಮ್ಸ್ ಶ್ರೀಮಂತ ಪಟ್ಟಿ”ಯಲ್ಲಿ 2 ಬಿಲಿಯನ್ ಪೌಂಡ್ ಗಳ ಅಂದಾಜು ಸಂಪತ್ತಿನಿಂದ 81ನೇ ಸ್ಥಾನ ಪಡೆದಿದ್ದರು. ಲಂಡನ್ ಮುಖ್ಯ ಕಚೇರಿಯ ಕ್ಯಾಪರೊ ಗ್ರೂಪ್ ಯುಕೆ, ಉತ್ತರ ಅಮೆರಿಕಾ, ಭಾರತ ಹಾಗೂ ಮಧ್ಯಪ್ರಾಚ್ಯದಲ್ಲಿ ವ್ಯವಹಾರಗಳನ್ನು ನಡೆಸುತ್ತಿದೆ. ಕಂಪನಿ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮಗ ಆಕಾಶ್ ಪಾಲ್ ಭಾರತದಲ್ಲಿ ಕ್ಯಾಪರೊ ಇಂಡಿಯಾದ ಅಧ್ಯಕ್ಷರಾಗಿದ್ದಾರೆ.
ಯುಕೆಯ ಭಾರತೀಯ ವಲಸೆ ಸಮುದಾಯದ ಸಕ್ರಿಯ ಸದಸ್ಯರಾಗಿದ್ದ ಅವರು, ಅನಾರೋಗ್ಯದ ನಡುವೆಯೂ ಹೌಸ್ ಆಫ್ ಲಾರ್ಡ್ಸ್ ಸಭೆಗಳಿಗೆ ನಿರಂತರವಾಗಿ ಹಾಜರಾಗುತ್ತಿದ್ದರು.