Tirumala (Andhra Pradesh): ತಿರುಮಲ ದೇವಸ್ಥಾನದಲ್ಲಿ (Tirumala temple) ಉದ್ಯೋಗವನ್ನು ಹಿಂದೂಗಳಿಗೆ ಮಾತ್ರ ನೀಡಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (CM Chandrababu Naidu) ಶುಕ್ರವಾರ ಘೋಷಿಸಿದರು.
ಸಿಎಂ ಮಾತನಾಡಿದ ವೇಳೆ, “ತಿರುಮಲ ದೇವಸ್ಥಾನದಲ್ಲಿ ಕೆಲಸಕ್ಕೆ ಹಿಂದೂಗಳನ್ನು ಮಾತ್ರ ನೇಮಿಸಬೇಕು. ಪ್ರಸ್ತುತ ಅಲ್ಲಿ ಕೆಲಸ ಮಾಡುತ್ತಿರುವ ಇತರ ಧರ್ಮೀಯರನ್ನು ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು” ಎಂದು ಹೇಳಿದರು.
ನಾಯ್ಡು, ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಿಸಲು ಯೋಜನೆ ಇದೆ ಎಂದು ಘೋಷಿಸಿದರು. ವಿಶ್ವದಾದ್ಯಂತ ಭಗವಾನ್ ವೆಂಕಟೇಶ್ವರನ ಆಸ್ತಿಗಳನ್ನು ರಕ್ಷಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ವಿದೇಶಗಳಲ್ಲಿಯೂ ವೆಂಕಟೇಶ್ವರನ ದೇವಾಲಯಗಳು ನಿರ್ಮಾಣವಾಗಬೇಕೆಂಬುದು ಭಕ್ತರ ಆಶಯ ಎಂದು ಅವರು ಹೇಳಿದರು.
ನಾಯ್ಡು, “ಬೆಟ್ಟದ ಸಮೀಪ ಮುಮ್ತಾಜ್ ಹೋಟೆಲ್ ತೆರೆಯಲು ಹಿಂದಿನ ಸರ್ಕಾರ ಅನುಮತಿ ನೀಡಿತ್ತು. ಆದರೆ 35.32 ಎಕರೆ ಭೂಮಿಯ ಈ ಯೋಜನೆಯನ್ನು ಈಗ ರದ್ದುಗೊಳಿಸಲಾಗಿದೆ. ಈ ಹೋಟೆಲ್ ಶುದ್ಧ ಶಾಕಾಹಾರಿ ಆಹಾರವನ್ನು ನೀಡಲು ಉದ್ದೇಶಿಸಿದ್ದರೂ, ಏಳು ಬೆಟ್ಟಗಳ ಬಳಿ ಯಾವುದೇ ಖಾಸಗಿ ವಾಣಿಜ್ಯ ಚಟುವಟಿಕೆ ಇರಬಾರದು” ಎಂದು ಹೇಳಿದರು.
ನಾಯ್ಡು, ತಮಗೆ ಭಗವಾನ್ ವೆಂಕಟೇಶ್ವರನ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುತ್ತಾ, “ನನ್ನ ಮೇಲೆ 24 ಕ್ಲೇಮೋರ್ ಮೈನ್ ಗಳ ದಾಳಿ ನಡೆಯಿತು. ಅಂತಹ ದೊಡ್ಡ ಸ್ಫೋಟದಿಂದ ಬದುಕುಳಿಯುವುದು ಅಸಾಧ್ಯ. ಆದರೆ ವೆಂಕಟೇಶ್ವರನ ದೈವಿಕ ಕೃಪೆಯಿಂದ ನಾನು ಬದುಕಿದ್ದೇನೆ” ಎಂದು ಹೇಳಿದರು.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಯು 2024ರ ನವೆಂಬರ್‌ನಲ್ಲಿ ಮುಮ್ತಾಜ್ ಹೋಟೆಲ್ ಗೆ ಭೂಮಿ ನೀಡುವ ಅನುಮತಿಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿತ್ತು. “ನಾವು ಈ ಗುತ್ತಿಗೆಯನ್ನು ರದ್ದುಗೊಳಿಸಲು ಸರ್ಕಾರಕ್ಕೆ ವಿನಂತಿಸಿದ್ದೇವೆ. ಆ ಭೂಮಿಯನ್ನು ದೇವಾಲಯಕ್ಕೆ ಹಸ್ತಾಂತರಿಸಬೇಕು” ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹೇಳಿದ್ದಾರೆ.