Chamarajanagar: ಗುಂಡ್ಲುಪೇಟೆ ತಾಲೂಕಿನ (Gundlupete taluk) ಕೆಲಸೂರುಪುರದ ವಸಂತಕುಮಾರ್ (ಅಕ್ಷಯ್) ಎಂಬ ರೈತ (Farmer) ಯಾವುದೇ ಶಾಸ್ತ್ರ- ಸಂಪ್ರದಾಯಗಳಿಲ್ಲದೇ, ಸಾವಯವ ಸಂತೆ (organic Fair) ಏರ್ಪಡಿಸಿ, ವಿಶೇಷ ವಚನ ಕಲ್ಯಾಣ ಮಹೋತ್ಸವದ ಮೂಲಕ ರಾಧಿಕ (ಪಾರ್ವತಿ) ಅವರ ಜೊತೆ ಬಾಳ ಪಯಣ (wedding) ಆರಂಭಿಸಿದರು.
ಗುಂಡ್ಲುಪೇಟೆ JSS ಅನುಭವ ಮಂಟಪದಲ್ಲಿ ನಡೆದ ಈ ವಿಶೇಷ ಮದುವೆಯಲ್ಲಿ ಸಂತೆಯೇ ಕೇಂದ್ರ ಬಿಂದು ಆಗಿತ್ತು. ಕಲ್ಯಾಣ ಮಂಟಪದ ಪ್ರವೇಶ ದ್ವಾರದಲ್ಲಿ ನೈಸರ್ಗಿಕ ಕೃಷಿಕರು ಸಾವಯವ ಮಳಿಗೆ ತೆರೆದಿದ್ದರು.
ವಚನ ಕಲ್ಯಾಣ ಮಹೋತ್ಸವಕ್ಕೆ ಬಂದಿದ್ದ ವಧು-ವರನ ಕಡೆಯವರು ಸಾವಯವ ಪದಾರ್ಥಗಳನ್ನು ಖರೀದಿಸಿ ರೈತರನ್ನು ಪ್ರೋತ್ಸಾಹಿಸಿದರು. ಸ್ಥಳದಲ್ಲಿ ಹಾಜರಿದ್ದ ಸಾವಯವ ಕೃಷಿಕರು ಕೃಷಿಯ ಮಹತ್ವದ ಬಗ್ಗೆ ತಿಳಿಸಿಕೊಡುವ ಮೂಲಕ ಕೃಷಿ ಜ್ಞಾನದ ಪ್ರಸಾರವೂ ಆಯಿತು.
ವಚನ ಗಾಯನ, ಸಹಜ ಶಿವಯೋಗ ಮತ್ತು ಸಾವಯವ ಕೃಷಿಯ ಮಹತ್ವ ಮದುವೆ ಮೆರಗು ಹೆಚ್ಚಿಸಿತು. ಶರಣ ತತ್ವ ಚಿಂತಕರಾದ ಬಸವಯೋಗಿ ಪ್ರಭು ಸ್ವಾಮೀಜಿ, ಮೂಡುಗೂರು ಇಮ್ಮಡಿ ಉದ್ದಾನ ಸ್ವಾಮೀಜಿ ಮತ್ತು ಬಸವ ತತ್ವ ಪ್ರಚಾರಕರಾದ ಚೌಡಹಳ್ಳಿ ನಿಂಗರಾಜಪ್ಪರ ನೇತೃತ್ವದಲ್ಲಿ ಲಿಂಗಪೂಜೆ, ವಚನಗಾಯನ ನಂತರ ಮಾಂಗಲ್ಯಧಾರಣೆ ನೆರವೇರಿಸಲಾಯಿತು.