
2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ. ಆದರೆ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ (Pakistan, New Zealand)ತಂಡಗಳು ಈ ಪಂದ್ಯಾವಳಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ICC (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಸಿಂಗಾಪುರ್‌ನಲ್ಲಿ ನಡೆದ ಸಭೆಯಲ್ಲಿ ಒಲಿಂಪಿಕ್ಸ್‌ಗಾಗಿ ಹೊಸ ಅರ್ಹತಾ ನಿಯಮಗಳನ್ನು ತಯಾರಿಸಿದೆ. ‘ಗಾರ್ಡಿಯನ್’ ಪತ್ರಿಕೆಯ ಪ್ರಕಾರ, ಪ್ರತಿ ಖಂಡದಿಂದ ಒಂದೊಂದು ಶ್ರೇಯಾಂಕದಲ್ಲಿರುವ ಟೀಂ ಆಯ್ಕೆಯಾಗಲಿದೆ. ಇದರಂತೆ,
- ಏಷ್ಯಾದಲ್ಲಿ: ಭಾರತ (ಕ್ರ.1)
- ಓಷಿಯಾನಿಯಾದಲ್ಲಿ: ಆಸ್ಟ್ರೇಲಿಯಾ (ಕ್ರ.1)
- ಆಫ್ರಿಕಾದಲ್ಲಿ: ದಕ್ಷಿಣ ಆಫ್ರಿಕಾ (ಕ್ರ.1)
- ಯುರೋಪಿನಲ್ಲಿ: ಇಂಗ್ಲೆಂಡ್ (ಕ್ರ.1)
- ಆತಿಥೇಯ ರಾಷ್ಟ್ರ: ಅಮೆರಿಕ
ಇದೇ ಲೆಕ್ಕಾಚಾರದ ಆಧಾರದ ಮೇಲೆ ಪಾಕಿಸ್ತಾನ (ಕ್ರ.8) ಮತ್ತು ನ್ಯೂಜಿಲೆಂಡ್ (ಓಷಿಯಾನಿಯಾದಲ್ಲಿ ಕ್ರ.2) ತಂಡಗಳು ಸ್ಥಾನ ಪಡೆಯದೆ ಉಳಿಯುವ ಸಾಧ್ಯತೆಯಿದೆ.
ಈ ಹೊಸ ನಿಯಮಗಳಿಂದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ನಿರಾಶೆಗೊಂಡಿವೆ. ಆದರೆ ಈ ನಿಯಮಗಳು ಇನ್ನೂ ಅಧಿಕೃತವಾಗಿ ಅಂಗೀಕಾರವಾಗಿಲ್ಲ. ಮತ್ತೊಂದೆಡೆ, ಅಮೆರಿಕದ ಕ್ರಿಕೆಟ್ ಮಂಡಳಿ ರಾಷ್ಟ್ರೀಯ ಮಾನ್ಯತೆಯನ್ನು ಪಡೆಯಲು ವಿಫಲವಾದರೆ, ಅಮೆರಿಕವೂ ಹೊರಗಾಗುವ ಸಾಧ್ಯತೆಯಿದೆ.
128 ವರ್ಷಗಳ ನಂತರ ಕ್ರಿಕೆಟ್ ಮತ್ತೆ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಪುರುಷ ಹಾಗೂ ಮಹಿಳಾ ತಂಡಗಳು ಟಿ20 ಮಾದರಿಯಲ್ಲಿ ಆಡಲಿವೆ. 1900 ರಲ್ಲಿ ಏಕೈಕ ಬಾರಿಗೆ ಕ್ರಿಕೆಟ್ ಒಲಿಂಪಿಕ್ಸ್‌ನಲ್ಲಿ ನಡೆದಿತ್ತು.