ಶಾರ್ಜಾದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಪಾಕಿಸ್ತಾನ 18 ರನ್ ಅಂತರದಿಂದ ಅಫ್ಘಾನಿಸ್ತಾನ ವಿರುದ್ಧ ಸೋಲು ಕಂಡಿದೆ.
ಅಫ್ಘಾನಿಸ್ತಾನ ಪರ ಸೇದಿಕುಲ್ಲಾ ಅಟಲ್ (64), ಇಬ್ರಾಹಿಂ ಜದ್ರಾನ್ (65) ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಮೊದಲ ವಿಕೆಟ್ ಬೇಗ ಕಳೆದುಕೊಂಡರೂ, ಈ ಜೋಡಿ 113 ರನ್ ಜೋಡಣೆ ಮಾಡಿ ತಂಡವನ್ನು ಬಲಪಡಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಸೇರಿಸಿತು. ಪಾಕ್ ಪರ ಫಾಹೀಮ್ ಅಶರ್ಫ್ 4 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಸೈಮ್ ಅಯೂಬ್ (0), ಸಾಹಿಬ್ಜಾದಾ ಫರ್ಹಾನ್ (18), ಫಖಾರ್ ಜಮಾನ್ (25), ಸಲ್ಮಾನ್ ಆಘಾ (20) ನಿರಾಸೆ ಮೂಡಿಸಿದರು. ಉಳಿದ ಆಟಗಾರರು ಸಹ ಹೋರಾಟ ನೀಡಲಿಲ್ಲ. 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಮಾತ್ರ ಕಲೆ ಹಾಕಿ ಪಾಕ್ ಸೋಲು ಕಂಡಿತು.
ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ, ರಶೀದ್ ಖಾನ್, ಮೊಹಮ್ಮದ್ ನಬಿ, ನೂರ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಲಾ 2 ಗೆಲುವುಗಳೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಯುಎಇ ಇನ್ನೂ ಗೆಲುವು ಸಾಧಿಸಿಲ್ಲ. ಈ ಸೋಲು ಏಷ್ಯಾ ಕಪ್ ಟೂರ್ನಿಗೂ ಮುನ್ನ ಪಾಕ್ ತಂಡಕ್ಕೆ ದೊಡ್ಡ ನಿರಾಸೆ ತಂದಿದೆ.







