
Bengaluru: ರೇಣುಕಾಸ್ವಾಮಿ ಹತ್ಯೆ ಪ್ರಕರಣದ(Renukaswamy murder case) ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಮಹಿಳೆ ಹಾಗೂ ಸಿಂಗಲ್ ಪೇರೆಂಟ್ ಆಗಿರುವುದರಿಂದ ಮಗಳ ಆರೈಕೆ ಮಾಡಬೇಕಿದೆ ಎಂಬ ಕಾರಣ ನೀಡಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ಇದನ್ನು ಪರಿಗಣಿಸದೆ ತಿರಸ್ಕರಿಸಿದೆ.
ಈ ಪ್ರಕರಣದಲ್ಲಿ ಪವಿತ್ರಾ ಗೌಡ ಸೇರಿದಂತೆ ನಟ ದರ್ಶನ್ ಹಾಗೂ ಇತರ ಏಳು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಪ್ರಸ್ತುತ ಎಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಜೈಲಿನಲ್ಲಿ ಆರೋಪಿಗಳಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂಬ ಆರೋಪ ಹೊರಬಂದ ಹಿನ್ನೆಲೆಯಲ್ಲಿ ಕೆಲ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಇದಾದ ನಂತರ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಕುರಿತು ಸರ್ಕಾರ ಮನವಿ ಸಲ್ಲಿಸಿದೆ. ಆದರೆ ದರ್ಶನ್ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದರ್ಶನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಪ್ರತಿಬಾರಿ ದೂರದ ಜೈಲಿಗೆ ತೆರಳುವುದು ಕುಟುಂಬ ಹಾಗೂ ವಕೀಲರಿಗೆ ಕಷ್ಟವಾಗುತ್ತದೆ ಎಂದು ಅವರು ಪ್ರತಿವಾದ ಮಂಡಿಸಿದ್ದಾರೆ. ಜೊತೆಗೆ ದರ್ಶನ್‌ಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.