New Delhi: ಗಾಜಾದಲ್ಲಿನ (Gaza) ಜನರು ಎದುರಿಸುತ್ತಿರುವ ಮಾನವೀಯ ಸಂಕಷ್ಟಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ಕದನ ವಿರಾಮವನ್ನು ತಕ್ಷಣ ಜಾರಿಗೆ ತರಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಆಗ್ರಹಿಸಿದೆ.
ಭಾರತದ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಬುಧವಾರ ಮಾತನಾಡಿ, “ಗಾಜಾದಲ್ಲಿ ಯುದ್ಧದ ಮಧ್ಯೆ ಕೆಲವು ವಿರಾಮಗಳನ್ನು ನೀಡಿದರೂ, ಅವು ಅಲ್ಲಿನ ಜನರಿಗೆ ಸಂಪೂರ್ಣ ಪರಿಹಾರ ನೀಡುವುದಿಲ್ಲ. ಶಾಂತಿ ತರುವ ಒಂದೇ ಮಾರ್ಗ ಎಂದರೆ ಸಂಪೂರ್ಣ ಕದನ ವಿರಾಮ ಮತ್ತು ರಾಜತಾಂತ್ರಿಕ ಮಾತುಕತೆ,” ಎಂದು ಹೇಳಿದರು.
ಅವರು ಮುಂದುವರೆದು, “ಗಾಜಾದಲ್ಲಿ ಆಹಾರ, ಇಂಧನ ಕೊರತೆ, ಆರೋಗ್ಯ ಸೇವೆಗಳ ಕೊರತೆ, ಹಾಗೂ ಶಿಕ್ಷಣದ ಲಭ್ಯತೆಯ ಕೊರತೆಯಿಂದ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಶಾಂತಿ ಸ್ಥಾಪಿಸಲು ಮತ್ತು ಮಾನವೀಯ ನೆರವು ನೀಡಲು ನಿರಂತರ ಪ್ರಯತ್ನ ಅವಶ್ಯಕ” ಎಂದರು.
ಭಾರತದ ದೃಷ್ಟಿಕೋಣವು ಎರಡು ದೇಶಗಳ ಪರಿಹಾರವಾಗಿದೆ. ಇದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ಪರಸ್ಪರ ಒಪ್ಪಿದ ಗಡಿಗಳೊಳಗೆ ಶಾಂತಿಯಿಂದ ಬದುಕುವ ವ್ಯವಸ್ಥೆಯೇ. ಭಾರತವು ಪ್ಯಾಲೆಸ್ತೀನ್ ಜೊತೆ ಐತಿಹಾಸಿಕವಾಗಿ ಬಲವಾದ ಸಂಬಂಧಗಳನ್ನು ಹೊಂದಿದೆ. ಪ್ಯಾಲೆಸ್ತೀನ್ ಮಕ್ಕಳ ಶಿಕ್ಷಣ ಮತ್ತು ಗಾಜಾದ ಆಸ್ಪತ್ರೆಗಳ ಹದಗೆಟ್ಟ ಸ್ಥಿತಿ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.
ಜುಲೈ 28 ರಿಂದ 30 ರವರೆಗೆ ನಡೆಯಲಿರುವ ಉನ್ನತ ಮಟ್ಟದ ಸಮ್ಮೇಳನದಲ್ಲಿ, ಇಸ್ರೇಲ್ – ಪ್ಯಾಲೆಸ್ತೀನ್ ಸಂಘರ್ಷದ ಪರ್ಯಾಯದ ಬಗ್ಗೆ ಸ್ಪಷ್ಟ ದೃಷ್ಟಿಕೋನ ಹೊರಬರಲಿದೆ ಎಂದು ಭಾರತ ನಂಬಿದೆ.