Moscow: ರಷ್ಯಾದ (Russia) ಪೂರ್ವ ಭಾಗದ ಅಮುರ್ ಪ್ರದೇಶದಲ್ಲಿ 49 ಜನರನ್ನು ಹೊತ್ತ AN-24 ವಿಮಾನವೊಂದು ತಾಂತ್ರಿಕ ದೋಷದ ಕಾರಣದಿಂದ ಪತನಗೊಂಡಿದೆ (Plane crashes). ಈ ಘಟನೆ ಗುರುವಾರ ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಕಾಲಮಾನ) ನಡೆದಿದೆ. ಸದ್ಯಕ್ಕೆ ಯಾರೂ ಬದುಕುಳಿದರಾ ಎಂಬ ಮಾಹಿತಿ ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಬೀರಿಯಾ ಮೂಲದ ಅಂಗಾರ ಏರ್ಲೈನ್ಸ್‌ಗೆ ಸೇರಿದ ಈ ವಿಮಾನ, ರಷ್ಯಾ-ಚೀನಾ ಗಡಿ ಭಾಗದ ಬ್ಲಾಗೊವೆಶ್ಚೆನ್ಸ್ಕ್ ನಗರದಿಂದ ಟಿಂಡಾ ಪಟ್ಟಣದತ್ತ ಹೊರಟಿತ್ತು. ಹಾರಾಟದ ಕೆಲ ನಿಮಿಷಗಳ ನಂತರ, ವಿಮಾನ ರಾಡಾರ್ನಿಂದ ಸಂಪರ್ಕ ಕಳೆದುಕೊಂಡಿತು. ಬಳಿಕ ಟಿಂಡಾದಿಂದ 15 ಕಿಮೀ ದೂರದ ಇಳಿಜಾರಾದ ಅರಣ್ಯ ಪ್ರದೇಶದಲ್ಲಿ ಪತನಗೊಂಡಿರುವುದು ದೃಢವಾಗಿದೆ.
ವಿಮಾನದಲ್ಲಿ 43 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು. ಐದು ಮಕ್ಕಳೂ ಇದ್ದರು ಎಂದು ಸ್ಥಳೀಯ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ. ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಸುದ್ದಿ ತಿಳಿದ ತಕ್ಷಣ ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, 25 ಮಂದಿ ಸಿಬ್ಬಂದಿ ಹಾಗೂ ಐದು ರಕ್ಷಣಾ ಘಟಕಗಳು ಕಾರ್ಯಚರಣೆಯಲ್ಲಿ ತೊಡಗಿವೆ. ಅರಣ್ಯ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಚರಣೆ ಕಠಿಣವಾಗುತ್ತಿದೆ.
ಫಾರ್ ಈಸ್ಟರ್ನ್ ಟ್ರಾನ್ಸ್ಪೋರ್ಟ್ ಪ್ರಾಸಿಕ್ಯೂಟರ್ ಕಚೇರಿ ಅಪಘಾತದ ವಿಷಯವನ್ನು ದೃಢಪಡಿಸಿದೆ. ವಿಮಾನವು ಎರಡನೇ ಲ್ಯಾಂಡಿಂಗ್ ಪ್ರಯತ್ನಿಸುತ್ತಿದ್ದಾಗ ಸಂಪರ್ಕ ಕಡಿತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
50 ವರ್ಷ ಹಳೆಯದಾದ ಈ ವಿಮಾನಕ್ಕೆ 2021ರಲ್ಲಿ ವಾಯುಯೋಗ್ಯ ಪ್ರಮಾಣಪತ್ರ ನೀಡಲಾಗಿದ್ದು, ಅದು 2036ರ ತನಕ ಮಾನ್ಯವಾಗಿತ್ತು ಎಂದು ರಷ್ಯಾದ TASS ಸುದ್ದಿ ಸಂಸ್ಥೆ ತಿಳಿಸಿದೆ.
- ಪತನಗೊಂಡ ವಿಮಾನದಲ್ಲಿ 49 ಜನರಿದ್ದರು
- ಸ್ಥಳಾಂತರಿಸಲು ರಕ್ಷಣಾ ತಂಡಗಳು ಕಾರ್ಯನಿರತ
- ಬದುಕುಳಿದವರ ಕುರಿತು ಇನ್ನೂ ಮಾಹಿತಿ ಇಲ್ಲ
- ಅಪಘಾತದ ಕಾರಣ ತನಿಖೆಯಲ್ಲಿ ತಿಳಿಯಲಿದೆ
ಇದು ರಷ್ಯಾದ ಇತಿಹಾಸದಲ್ಲೊಂದು ಗಂಭೀರ ವಿಮಾನ ದುರಂತವಾಗಿ ದಾಖಲಾಗುತ್ತಿದೆ.