Bengaluru: ಪ್ಲಾಸ್ಟಿಕ್ ಬಳಕೆಯಿಂದ (Plastic bottle) ಪರಿಸರಕ್ಕೆ ಆಗುವ ಹಾನಿಯನ್ನು ತಡೆಯಲು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಾಟಲ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜನವರಿ 31ರಂದು ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದ್ದು, ಪರ್ಯಾಯ ವ್ಯವಸ್ಥೆಗಳನ್ನೂ ಅನುಸರಿಸುವಂತೆ ಸಲಹೆ ನೀಡಲಾಗಿದೆ.
ಪ್ಲಾಸ್ಟಿಕ್ ವಸ್ತುಗಳ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಚಿವಾಲಯ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಮಂಡಳಿಗಳು, ನಿಗಮಗಳು, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳ ಸಭೆಗಳಲ್ಲಿ ಪ್ಲಾಸ್ಟಿಕ್ ಬಾಟಲಿನ ನೀರಿನ ಬಳಕೆ ನಿಷೇಧಿಸಲಾಗಿದೆ. ಅದರ ಬದಲು ಗ್ಲಾಸ್, ಸ್ಟೀಲ್, ಪೇಪರ್ ಮುಂತಾದ ಪರ್ಯಾಯ ಲೋಟಗಳಲ್ಲಿ ನೀರನ್ನು ಸರಬರಾಜು ಮಾಡಲು ಸೂಚಿಸಲಾಗಿದೆ.
ಈ ರೀತಿಯ ನಿಷೇಧದ ಆದೇಶವನ್ನು 2024ರ ನವೆಂಬರ್‌ನಲ್ಲೇ ಹೊರಡಿಸಲಾಗಿತ್ತು. ಆದರೆ, ಸರಿಯಾಗಿ ಜಾರಿಗೆ ಬರದ ಕಾರಣ ಸರ್ಕಾರ ಮತ್ತೊಮ್ಮೆ ಈ ನಿಷೇಧವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ. ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ಪರಿಕರಗಳ ಬಳಕೆಯನ್ನು ಉತ್ತೇಜಿಸುವಂತೆ ಆದೇಶಿಸಲಾಗಿದೆ.
ಎಲ್ಲ ಸರ್ಕಾರಿ ಇಲಾಖೆ ಮುಖ್ಯಸ್ಥರು ಈ ನಿಯಮವನ್ನು ತಮ್ಮ ಅಧೀನದಲ್ಲಿ ಇರುವ ಎಲ್ಲಾ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.