2024ರ ನವೆಂಬರ್ 19 ರಿಂದ 21 ರವರೆಗೆ, ಪ್ರಧಾನಿ ಧಾನಿ ನರೇಂದ್ರ ಮೋದಿಯು (PM Modi) ಐತಿಹಾಸಿಕ ಗಯಾನಾ (Guyana) ಭೇಟಿಯನ್ನು ಕೈಗೊಂಡಿದ್ದಾರೆ. ಇದು 1968ರ ನಂತರದ ಮೊದಲ ಬಾರಿ, ದಕ್ಷಿಣ ಅಮೆರಿಕಾದ (South America) ಗಯಾನಾಗೆ ಭಾರತೀಯ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು 56 ವರ್ಷಗಳ ಬಳಿಕ ಗಯಾನಾಗೆ ಭೇಟಿ ನೀಡುತ್ತಿದ್ದಾರೆ. ಇದು ಎರಡೂ ದೇಶಗಳ ನಡುವಿನ ಬಲವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಗಯಾನಾದೊಂದಿಗೆ ಬಾಂಧವ್ಯವನ್ನು ಗಾಢಗೊಳಿಸಲು ಮತ್ತು ಕೆರಿಬಿಯನ್ ಸಮುದಾಯದಲ್ಲಿ (CARICOM) ಭಾರತವು ತನ್ನ ಪ್ರಭಾವವನ್ನು ವಿಸ್ತರಿಸುವ ಬದ್ಧತೆಯನ್ನು ತೋರಿಸುತ್ತದೆ.
ಪ್ರಧಾನಿ ಮೋದಿ ಮತ್ತು ಗಯಾನಾ ಅಧ್ಯಕ್ಷ ಅಲಿ ಅವರು ಇಂಧನ, ರಕ್ಷಣಾ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜಾರ್ಜ್ ಟೌನ್‌ನಲ್ಲಿ ಎರಡನೇ ಭಾರತ-ಕ್ಯಾರಿಕಾಮ್ ಶೃಂಗಸಭೆ ನಡೆಯಲಿದೆ. 2023ರಲ್ಲಿ ಭಾರತದಲ್ಲಿ ನಡೆದ 17ನೇ ಪ್ರವಾಸಿ ಭಾರತೀಯ ದಿವಸದ ಸಂದರ್ಭದಲ್ಲಿ ಇದೇ ಸಭೆ ನಡೆಸಲಾಗಿತ್ತು.
ಭಾರತವು ಅದೇ ಸಭೆಯಲ್ಲಿ ಗಯಾನಾ ಅಧ್ಯಕ್ಷ ಅಲಿ ಅವರಿಗೆ ಪ್ರವಾಸಿ ಭಾರತೀಯ ಸಮ್ಮಾನ್ ನೀಡಿ ಗೌರವಿಸಿತ್ತು. ಇದು ಅನಿವಾಸಿ ಭಾರತೀಯರು ಮತ್ತು ಭಾರತ ಮೂಲದ ಜನರಿಗೆ ನೀಡುವ ಅತ್ಯುನ್ನತ ಗೌರವವಾಗಿದೆ.
ಇತ್ತೀಚೆಗೆ, ಗಯಾನಾದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಭಾರತವು ಗಮನಾರ್ಹ ಕೊಡುಗೆಗಳನ್ನು ನೀಡಿದೆ. ದೇಶದ ವೈಮಾನಿಕ ಕಣ್ಗಾವಲು ಮತ್ತು ವಿಪತ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಹೆಚ್ಚಿಸಲು, ಭಾರತವು ಗಯಾನಾ ರಕ್ಷಣಾ ಪಡೆಗೆ 23.37 ಮಿಲಿಯನ್ ಡಾಲರ್ ಸಾಲದಲ್ಲಿ ಎರಡು ಡಾರ್ನಿಯರ್-228 ವಿಮಾನಗಳನ್ನು ಒದಗಿಸಿದೆ.