Patna: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಗೆ ಭೇಟಿ ನೀಡಿದ್ದು, ₹7,200 ಕೋಟಿ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ವಿವಿಧ ಕ್ಷೇತ್ರಗಳ ಯೋಜನೆಗಳಿಗೆ ಚಾಲನೆ: ರೈಲು, ರಸ್ತೆ, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳ ಯೋಜನೆಗಳಿಗೆ ಮೋದಿ ಅವರು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದಾರೆ.
ರೈಲು ಹಾಗೂ ಐಟಿ ಕ್ಷೇತ್ರದ ಅಭಿವೃದ್ಧಿ: ದರ್ಭಾಂಗದಲ್ಲಿ ಹೊಸ ತಂತ್ರಜ್ಞಾನ ಪಾರ್ಕ್ ಮತ್ತು ಪಾಟ್ನಾದಲ್ಲಿ ಸ್ಟಾರ್ಟ್ಅಪ್‌ಗಳಿಗೆ ಇನ್ಕ್ಯುಬೇಶನ್ ಕೇಂದ್ರವನ್ನು ಆರಂಭಿಸಲಿದ್ದಾರೆ. ನಾಲ್ಕು ಹೊಸ ಅಮೃತ್ ಭಾರತ್ ರೈಲುಗಳು ಸೇರಿದಂತೆ ಹಲವಾರು ಯೋಜನೆಗಳನ್ನು ದೇಶಕ್ಕೆ ಸಮರ್ಪಣೆ ಮಾಡುತ್ತಿದ್ದಾರೆ.
ರಸ್ತೆ ಸೌಲಭ್ಯ ವಿಸ್ತರಣೆ: ಪಾಟ್ನಾ-ಬಕ್ಸರ್ ನ್ನು ಸಂಪರ್ಕಿಸುವ ಹೆದ್ದಾರಿ, ಅರಾ ಬೈಪಾಸ್, ಮತ್ತು ಪರಾರಿಯಾದಿಂದ ಮೊಹಾನಿಯಾ ಸೆಕ್ಷನ್ ನಡುವೆ ನಾಲ್ಕು ಪಥದ ರಸ್ತೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ.
ಸ್ವ–ಸಹಾಯ ಗುಂಪುಗಳಿಗೆ ಹಣ ಬಿಡುಗಡೆ: 61,500 ಮಹಿಳಾ ಸ್ವಸಹಾಯ ಗುಂಪುಗಳಿಗೆ ₹400 ಕೋಟಿ ಬಿಡುಗಡೆಗೊಳ್ಳುತ್ತಿದ್ದು, ಮಹಿಳಾ ಉದ್ದಿಮೆ ಅಭಿವೃದ್ಧಿಗೆ ₹10 ಕೋಟಿ ಹೆಚ್ಚಾಗಿ ನೀಡಿದ್ದಾರೆ.
ಆವಾಸ ಯೋಜನೆ ಲಾಭ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 40,000 ಫಲಾನುಭವಿಗಳಿಗೆ ₹160 ಕೋಟಿ ಬಿಡುಗಡೆಗೊಳ್ಳುತ್ತಿದ್ದು, 12,000 ಮನೆಗಳಿಗೆ ಕೀಲಿಗಳು ಹಸ್ತಾಂತರವಾಗಲಿವೆ.
ಪಶ್ಚಿಮ ಬಂಗಾಳಕ್ಕೆ ₹5,000 ಕೋಟಿ ಯೋಜನೆ: ದುರ್ಗಾಪುರ ನಗರಕ್ಕೆ ಆಗಮಿಸುತ್ತಿರುವ ಮೋದಿ, 5,000 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ, ಬಿಜೆಪಿ ಸಮಾವೇಶವನ್ನೂ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ಚುನಾವಣೆ ಹಿನ್ನೆಲೆ ಮೋದಿ ಅವರ ಈ ಭೇಟಿ ರಾಜಕೀಯ ವಲಯದಲ್ಲಿ ದೊಡ್ಡದಾಗಿ ಗಮನ ಸೆಳೆದಿದೆ.