
Zagreb, Croatia: ಪ್ರಧಾನಿ ನರೇಂದ್ರ ಮೋದಿ (PM Modi) ಕ್ರೊಯೇಷಿಯಾಕ್ಕೆ (Croatia) ಭೇಟಿ ನೀಡಿದ್ದು, ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡುವುದು ಇದೇ ಮೊದಲು. ಈ ವಿಶೇಷ ಸಂದರ್ಭದಲ್ಲಿ ಅವರು ಕ್ರೊಯೇಷಿಯಾದ ಪ್ರಧಾನಿಮಂತ್ರಿ ಆಂಡ್ರೆಜ್ ಪ್ಲೆಂಕೋವಿಕ್ ಮತ್ತು ರಾಷ್ಟ್ರಪತಿ ಜೋರನ್ ಮಿಲನೋವಿಕ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.
ಮೋದಿ ಜಾಗ್ರೆಬ್ ನ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಪ್ರಧಾನಿಮಂತ್ರಿ ಪ್ಲೆಂಕೋವಿಕ್ ಸ್ವತಃ ವಿಮಾನ ನಿಲ್ದಾಣಕ್ಕೆ ಬಂದು ಅವರ ಆತ್ಮೀಯವಾಗಿ ಸ್ವಾಗತಿಸಿದರು. ಇದನ್ನು ಪ್ರಧಾನಿ ಮೋದಿ ತಮ್ಮ X (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಶೇರ್ ಮಾಡಿ ಕೃತಜ್ಞತೆ ವ್ಯಕ್ತಪಡಿಸಿದರು.
ಪ್ಲೆಂಕೋವಿಕ್ ಮಾತನಾಡುತ್ತಾ, ಈ ಭೇಟಿ ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತೆ ಮತ್ತು ದ್ವಿಪಕ್ಷೀಯ ಸಹಕಾರಕ್ಕೆ ಹೊಸ ದಾರಿ ತೆರುತ್ತೆ ಎಂದರು.
ವಿದೇಶಾಂಗ ಸಚಿವಾಲಯ ಈ ಭೇಟಿಯನ್ನು ಐತಿಹಾಸಿಕ ಘಟ್ಟವೆಂದು ವರ್ಣಿಸಿದೆ. ಕ್ರೊಯೇಷಿಯಾವನ್ನು ಭೇಟಿ ಮಾಡಿದ ಮೊದಲ ಭಾರತೀಯ ಪ್ರಧಾನಿಯಾಗಿರುವ ಮೋದಿಗೆ, ರಾಷ್ಟ್ರದ ಪ್ರಧಾನಮಂತ್ರಿ ಸ್ವಾಗತ ಸಲ್ಲಿಸಿದ್ದಾರೆ ಎಂಬುದು ವಿಶೇಷವೆಂದು ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಮೋದಿ ಹೋಟೆಲ್ಗೆ ತಲುಪಿದಾಗ ಕ್ರೊಯೇಷಿಯಾದಲ್ಲಿರುವ ಭಾರತೀಯರು “ವಂದೇ ಮಾತರಂ” ಮತ್ತು “ಭಾರತ್ ಮಾತಾ ಕಿ ಜೈ” ಘೋಷಣೆಗಳಿಂದ ಅವರನ್ನು ಸ್ವಾಗತಿಸಿದರು. ಸಾಂಪ್ರದಾಯಿಕ ನೃತ್ಯಗಳಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಮೋದಿ ಈ ಭೇಟಿಯಿಂದ ಮೊದಲು ಸೈಪ್ರಸ್ ಮತ್ತು ನಂತರ ಕೆನಡಾ ಭೇಟಿನೀಡಿ, ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಇದೀಗ ಕ್ರೊಯೇಷಿಯಾ ಭೇಟಿಯಿಂದ ತಮ್ಮ ಬಹು ದೇಶಗಳ ಪ್ರವಾಸವನ್ನು ಮುಗಿಸುತ್ತಿದ್ದಾರೆ.
ಭಾರತ ಮತ್ತು ಕ್ರೊಯೇಷಿಯಾ ಶತಮಾನಗಳ ಹಿಂದಿನ ಸಾಂಸ್ಕೃತಿಕ ಸಂಬಂಧ ಹೊಂದಿವೆ. ಈ ಭೇಟಿಯಿಂದ ಎರಡು ದೇಶಗಳ ಸಂಬಂಧ ಇನ್ನಷ್ಟು ಗಾಢವಾಗುವ ನಿರೀಕ್ಷೆಯಿದೆ.