ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ (Mahakumbh Mela) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಫೆಬ್ರವರಿ 5ರಂದು ಭೇಟಿ ನೀಡಲಿದ್ದಾರೆ. ಈ ದಿನ, ಮಾಘ ಮಾಸದ ಅಷ್ಟಮಿಯ ಸಂದರ್ಭದಲ್ಲಿ, ಅವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ ಮತ್ತು ಗಂಗೆಗೆ ಪೂಜೆ ಸಲ್ಲಿಸಲಿದ್ದಾರೆ.
ಪ್ರಧಾನಿ ಮೋದಿ ಬೆಳಗ್ಗೆ 10 ಗಂಟೆಗೆ ಮಹಾಕುಂಭ ಮೇಳಕ್ಕೆ ತಲುಪಲಿದ್ದಾರೆ. ಅರೈಲ್ ಘಾಟ್ ನಿಂದ ದೋಣಿ ಮೂಲಕ ಸಂಗಮಕ್ಕೆ ತೆರಳಲಿದ್ದು, ಒಟ್ಟು ಒಂದು ಗಂಟೆ ಪ್ರಯಾಗ್ರಾಜ್ ನಲ್ಲಿಯೇ ಇರಲಿದ್ದಾರೆ. ಈ ಅವಧಿಯಲ್ಲಿ, ಅವರು ಸ್ನಾನ ಮಾಡಿ ಗಂಗೆಯನ್ನು ಪೂಜಿಸಿ ನಂತರ ಹಿಂತಿರುಗಲಿದ್ದಾರೆ.
2019 ರ ಕುಂಭಮೇಳಕ್ಕೂ ಮತ್ತು 2024ರ ಡಿಸೆಂಬರ್ 13ನೇ ತಾರೀಕಿನಲ್ಲಿಯೂ ಪ್ರಧಾನಿ ಮೋದಿ ಸಂಗಮದ ದಡದಲ್ಲಿ ಗಂಗಾ ಆರತಿ ಮತ್ತು ಪೂಜೆ ಸಲ್ಲಿಸಿದ್ದರು. ಈ ಬೃಹತ್ ಧಾರ್ಮಿಕ ಸಮಾರಂಭ ಯಶಸ್ವಿಯಾಗಿ ನಡೆಯಲಿ ಎಂದು ಅವರು ಪ್ರಾರ್ಥಿಸಿದ್ದರು.
ಪ್ರಧಾನಿ ಅವರ ಭೇಟಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಗೆ ವಿಶೇಷ ವಿಮಾನದ ಮೂಲಕ ಅವರು ಬಮ್ರೌಲಿ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ಮೂರು ಸೇನಾ ಹೆಲಿಕಾಪ್ಟರ್ ಗಳ ಮೂಲಕ ಡಿಪಿಎಸ್ ಮೈದಾನದ ಹೆಲಿಪ್ಯಾಡ್ ಗೆ ಹೋಗಲಿದ್ದಾರೆ. ನಂತರ ಕಾರಿನಲ್ಲಿ ಅಲ್ಲಿಂದ ಅರೈಲ್ ಘಾಟ್ ಗೆ ತೆರಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ವಾಯುಪಡೆಯ ವಿಮಾನದ ಮೂಲಕ ಅವರು ಪ್ರಯಾಗ್ರಾಜ್ನಿಂದ ಹಿಂತಿರುಗಲಿದ್ದಾರೆ.