ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿರುವ ಪ್ರಜ್ವಲ್ ವಿರುದ್ಧ, ಈಗ SIT ಟ್ರಯಲ್ ಪ್ರಾರಂಭಿಸಲು ಮುಂದಾಗಿದೆ. ಜಾಮೀನು ಸಿಗದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ಪ್ರಜ್ವಲ್ ರೇವಣ್ಣ, ಇದೀಗ ಹೊಸ ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದಾರೆ.
SIT ಇಂದು ಪ್ರಜ್ವಲ್ ವಿರುದ್ಧ ಚಾರ್ಜ್ ಫ್ರೇಮ್ ಮಾಡಲಿದ್ದು, ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಕಳೆದ ಆರು ತಿಂಗಳಿನಿಂದ ಜೈಲಿನಲ್ಲಿರುವ ಪ್ರಜ್ವಲ್, ಇಂದು ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ. ಪ್ರಜ್ವಲ್ ವಿರುದ್ಧ ದೋಷಾರೋಪಪಟ್ಟಿಯ ಮೇಲೆ ವಿಚಾರಣೆ ಪ್ರಾರಂಭವಾಗಲಿದೆ.
ಪ್ರಜ್ವಲ್ ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯೂ ವಜಾಗೊಂಡಿದೆ. ಆರೋಪಿಯ ಪ್ರಭಾವವು ಪ್ರಕರಣದ ವಿಚಾರಣೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕಾಗಿ ಕೋರ್ಟ್ ಜಾಮೀನು ನಾಕರಿಸಿದೆ. 6 ತಿಂಗಳ ಬಳಿಕ ಮತ್ತೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಹೆಚ್.ಡಿ. ರೇವಣ್ಣ ವಿರುದ್ಧ 2015ರಲ್ಲಿ ಸಂತ್ರಸ್ತೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಪ್ರಕರಣ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, 354A, 354D ಮತ್ತು 509 ಸೆಕ್ಷನ್ ಅಡಿ ಆರೋಪ ಹೊರಿಸಲಾಗಿದೆ.
ಪ್ರಜ್ವಲ್ ವಿರುದ್ಧದ ವಿಚಾರಣೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಪರ ಕಾನೂನು ಬಲಕ್ಕೆ ಸವಾಲುಗಳು ಹೆಚ್ಚಾಗಿವೆ. ಈ ಕುರಿತು ಮುಂದಿನ ದಿನಗಳಲ್ಲಿ ನ್ಯಾಯಾಲಯ ತೀರ್ಮಾನ ಮಹತ್ತರವಾಗಲಿದೆ.