Mysuru: ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ FIR ದಾಖಲಾಗಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್ ನೀಡಿದ ದೂರು ಆಧರಿಸಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೆಬ್ರವರಿ 20 ರಂದು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಮರು ಈ ದೇಶದ ಪ್ರಜೆಗಳೇ ಅಲ್ಲ ಎಂಬ ರೀತಿಯಲ್ಲಿ ಹಾಗೂ ಜನಸಂಖ್ಯೆ ಹೆಚ್ಚಿಸಲು ಹೆಚ್ಚು ಮಕ್ಕಳು ಹುಟ್ಟಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್ ಅವರ ದಾವೆಯ ಪ್ರಕಾರ, ಪ್ರತಾಪ್ ಸಿಂಹ ಅವರ ಹೇಳಿಕೆ ಕೋಮು ಸೌಹಾರ್ದತೆಗೆ ಧಕ್ಕೆಯೊಡ್ಡುವಂತಹುದಾಗಿದೆ. ಮುಸ್ಲಿಂ ಸಮುದಾಯದ ಜನರನ್ನು ನಿಂದಿಸುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ, “ದೇಶ ವಿಭಜನೆಯಾಗಿದಾಗಲೇ ಮುಸ್ಲಿಮರು ಇಲ್ಲಿಂದ ಹೋಗಬೇಕಿತ್ತು. ಆದರೆ ಇಲ್ಲೇ ಉಳಿದು ಮಕ್ಕಳನ್ನು ಹುಟ್ಟಿಸುವುದರಲ್ಲಿ ಮಾತ್ರ ತೊಡಗಿದ್ದಾರೆ” ಎಂಬಂತೆ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ಸಾಮಾಜಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.