Bengaluru: ಬೆಳಗಾವಿ ರಾಜಕೀಯದಲ್ಲಿ ಬಣ ತಿಕ್ಕಾಟ ಮತ್ತೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಎಂಟ್ರಿಯಾದ ನಂತರ ಶಾಂತವಾಗಿದ್ದ ಸಂಘರ್ಷ ಪುನಃ ಮೆಲುಕುಹಾಕುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬಣದ 15 ಶಾಸಕರ ತಂಡ ದುಬೈ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.
ಗಾಂಧಿ ಭಾರತ ಸಮಾವೇಶದ ವೇಳೆ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಬಗ್ಗೆ ಚರ್ಚೆ ನಡೆದಿತ್ತು. ನಂತರ ಅದು ತಣ್ಣಗಾದರೂ, ಈಗ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ. ಇದನ್ನು ಜಾರಕಿಹೊಳಿ ತಮ್ಮ ಶಕ್ತಿ ಪ್ರದರ್ಶನದ ಅಂಗವಾಗಿ ಬಳಸುತ್ತಿದ್ದಾರೆ ಎನ್ನಲಾಗಿದೆ.
ಹಿಡಕಲ್ ಡ್ಯಾಮ್ ಪೈಪ್ಲೈನ್ ಕಾಮಗಾರಿ ಅನುಮೋದನೆಯೇ ಜಾರಕಿಹೊಳಿ ಅಸಮಾಧಾನದ ಪ್ರಮುಖ ಕಾರಣ. ಡಿಸಿಎಂ ಡಿಕೆ ಶಿವಕುಮಾರ್ 300 ಕೋಟಿ ರೂ. ಮೊತ್ತದ ಈ ಕಾಮಗಾರಿಗೆ ಸೈಲೆಂಟಾಗಿ ಅನುಮೋದನೆ ನೀಡಿದ್ದು, ಸತೀಶ್ ಅವರನ್ನು ಕೆರಳಿಸಿದೆ.
ಬೆಳಗಾವಿಯ ಶಾಸಕರು ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಡ್ಯಾಮ್ ನಮ್ಮದು, ಆದರೆ ನೀರು ಧಾರವಾಡಕ್ಕೆ” ಎಂಬ ಅಸಮಾಧಾನ ಉಲಿದಿದ್ದು, ಅವರನ್ನೆ ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ತೆಗೆದುಕೊಂಡ ಬಗ್ಗೆ ರೋಷ ವ್ಯಕ್ತವಾಗಿದೆ.
ಡಿಕೆಶಿ ನಿರ್ಧಾರಗಳ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಸತೀಶ್ ಜಾರಕಿಹೊಳಿ, ತಮ್ಮ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಫೆಬ್ರವರಿ ಮೊದಲ ವಾರದವರೆಗೆ ಶಾಂತವಾಗಿರಿ ಎಂದು ತಮ್ಮ ಬಣದ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಹಿಡಕಲ್ ಡ್ಯಾಮ್ ಪೈಪ್ಲೈನ್ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಸತೀಶ್ ಜಾರಕಿಹೊಳಿ ಡಿಸಿಗೆ ಸೂಚನೆ ನೀಡಿದ್ದಾರೆ. ಇದರಿಂದ ಡಿಕೆ ಶಿವಕುಮಾರ್ ಮತ್ತು ಜಾರಕಿಹೊಳಿ ನಡುವಣ ರಾಜಕೀಯ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.