ಬಸ್ತಾರ್ ಎಂದರೆ ಸಾಮಾನ್ಯವಾಗಿ ನಕ್ಸಲ್ ಸಮಸ್ಯೆ, ಗನ್‌ಪೌಡರ್ ಹಾಗೂ ಸಂಘರ್ಷದ ಹೆಸರು. ಆದರೆ ಇದೀಗ ಬಸ್ತಾರ್‌ನ ಬುಡಕಟ್ಟು ಸಮುದಾಯದ ಯುವತಿ ಖುಷ್ಬೂ ನಾಗ್ (Khushboo Nag) ಅವರು ದೇಹದಾರ್ಢ್ಯ ಮತ್ತು ಪವರ್ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿ ಬಸ್ತಾರ್‌ಗೆ ಹೊಸ ಗುರುತನ್ನು ತಂದಿದ್ದಾರೆ.
ಬಡ ಕುಟುಂಬದಲ್ಲಿ ಬೆಳೆದರೂ, ತಂದೆಯ ಪ್ರೋತ್ಸಾಹ ಮತ್ತು ತಾಯಿಯ ನೆನಪುಗಳ ಶಕ್ತಿ ಖುಷ್ಬೂಗೆ ಹೋರಾಟದ ಹಾದಿ ನೀಡಿತು. ತಾಯಿಯನ್ನು ಕಳೆದುಕೊಂಡ ನಂತರ, ಸಹೋದರನ ಸಲಹೆಯಿಂದ ಜಿಮ್ ಸೇರಿ ತರಬೇತಿ ಆರಂಭಿಸಿದ ಅವರು, ಅದನ್ನು ಬದುಕಿನ ಉದ್ದೇಶವನ್ನಾಗಿ ಮಾಡಿಕೊಂಡರು.
ಆರಂಭದಲ್ಲಿ ಮಹಿಳೆ ಪವರ್ ಲಿಫ್ಟಿಂಗ್ ಮಾಡುವುದು ಅಪರೂಪವಾಗಿದ್ದ ಕಾರಣ ಟೀಕೆ-ಅಪಹಾಸ್ಯ ಎದುರಿಸಿದರೂ, ಖುಷ್ಬೂ ಅವರ ಸಾಧನೆ ಜನರ ದೃಷ್ಟಿಕೋನ ಬದಲಿಸಿತು. ನಾರಾಯಣಪುರದಲ್ಲಿ ಸರಿಯಾದ ಜಿಮ್ ಸೌಲಭ್ಯಗಳ ಕೊರತೆ, ಪೌಷ್ಟಿಕಾಂಶದ ಬೆಂಬಲ ಹಾಗೂ ಸರ್ಕಾರದ ಸಹಾಯದ ಅಭಾವದಲ್ಲಿಯೂ ಅವರು ಹಿಂಜರಿಯಲಿಲ್ಲ.
ಮೂರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕ, “ಛತ್ತೀಸ್ ಗಢದ ಬಲಿಷ್ಠ ಮಹಿಳೆ” ಬಿರುದು ಹಾಗೂ 470 ಕೆಜಿ ತೂಕ ಎತ್ತಿ “ಭಾರತದ ಬಲಿಷ್ಠ ಮಹಿಳೆ” ಬಿರುದನ್ನು ಗಳಿಸಿದರು. ಮುಂಬೈಯಲ್ಲಿ ನಡೆದ NPC Worldwide Championship ನಲ್ಲಿ ಕಂಚಿನ ಪದಕ ಪಡೆದು ಛತ್ತೀಸ್ಗಢದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
“ಛತ್ತೀಸ್ ಗಢದಲ್ಲಿ ಅನೇಕ ಪ್ರತಿಭೆಗಳಿವೆ, ಆದರೆ ಅವರನ್ನು ಗುರುತಿಸುವವರು ಕಡಿಮೆ. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಸಾಧಿಸಬಹುದು” ಎಂದು ಖುಷ್ಬೂ ಅವರು ಸಂದೇಶ ನೀಡಿದ್ದಾರೆ.







