New Delhi: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮತ್ತು ವ್ಯಾಪಾರೇತರ ವಿಷಯಗಳ ಕುರಿತು ವಿವಿಧ ಹಂತಗಳಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಾಪಾರ ಮಾತುಕತೆಗಾಗಿ ಕೇಂದ್ರದ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಗೋಯೆಲ್ ಅಮೆರಿಕದಲ್ಲಿದ್ದಾರೆ. ಅವರ ಜೊತೆ ಅನೇಕ ಸಚಿವಾಲಯದ ಹಿರಿಯ ಅಧಿಕಾರಿಗಳು, ವಿಶೇಷ ಕಾರ್ಯದರ್ಶಿ ಹಾಗೂ ಭಾರತದ ಮುಖ್ಯ ಸಮಾಲೋಚಕ ರಾಜೇಶ್ ಅಗರ್ವಾಲ್ ಇದ್ದಾರೆ.
ಮಾತುಕತೆಗಳು ವಿವಿಧ ಹಂತದಲ್ಲಿ ನಡೆಯುತ್ತಿದ್ದು, ಗೋಯಲ್ ಅಮೆರಿಕದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಸಚಿವರನ್ನು ಒಳಗೊಂಡ ಈ ತಂಡ ಮುಂದಿನ ವಾರ ಭಾರತಕ್ಕೆ ಮರಳಲಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ಮುಖ್ಯ ಸಮಾಲೋಚಕ ಬ್ರೆಂಡನ್ ಲಿಂಚ್ ಮತ್ತು ಅಗರ್ವಾಲ್ ಚರ್ಚೆ ನಡೆಸಿದ್ದಾರೆ. ಮಾತುಕತೆಯ ಬಳಿಕ ಸೆಪ್ಟೆಂಬರ್ 16ರಂದು ನೀಡಿದ ಹೇಳಿಕೆಯಲ್ಲಿ, ದ್ವಿಪಕ್ಷೀಯ ಒಪ್ಪಂದ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಎರಡು ದೇಶಗಳೂ ಪರಸ್ಪರ ಪ್ರಯೋಜನಕಾರಿ ನಿರ್ಣಯಕ್ಕೆ ಒಪ್ಪಿದ್ದಾರೆ ಎಂದು ತಿಳಿಸಲಾಗಿದೆ.
ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮೇಲೆ ಅಮೆರಿಕ ಶೇ.25 ಸುಂಕ ಹೆಚ್ಚಿಸಿದ ಬಳಿಕ, ಇದೇ ಮೊದಲ ಬಾರಿಗೆ ಅಮೆರಿಕದ ಉನ್ನತ ಹಂತದ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಎರಡು ದೇಶಗಳ ನಾಯಕರು ಕೂಡ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಸೂಚಿಸಿದ್ದರು. ಯೋಜನೆಯಂತೆ 2025ರ ಅಕ್ಟೋಬರ್-ನವೆಂಬರ್‌ನಲ್ಲಿ ಒಪ್ಪಂದದ ಮೊದಲ ಕಂತನ್ನು ಮುಕ್ತಾಯಗೊಳಿಸಲು ಯೋಜಿಸಲಾಗಿದೆ. ಈಗುವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿವೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು 2030ರೊಳಗೆ ಪ್ರಸ್ತುತ 191 ಬಿಲಿಯನ್ ಡಾಲರ್ನಿಂದ 500 ಬಿಲಿಯನ್ ಡಾಲರ್ ಹೆಚ್ಚಿಸುವ ಗುರಿ ಹೊಂದಿದೆ.
ಮುಂದೆ, ಗೋಯಲ್ ವಾಷಿಂಗ್ಟನ್‌ಗೆ ತೆರಳಿ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅಮೆರಿಕವು ಭಾರತವನ್ನು ದೊಡ್ಡ ವ್ಯಾಪಾರಿ ದೇಶವಾಗಿ ಗುರುತಿಸಿ ನಾಲ್ಕನೇ ವರ್ಷವೂ ಈ ಸ್ಥಾನವನ್ನು ಕಾಯ್ದುಕೊಂಡಿದ್ದು, ದ್ವಿಪಕ್ಷೀಯ ವ್ಯಾಪಾರದ ಮೌಲ್ಯ 131.84 ಬಿಲಿಯನ್ ಡಾಲರ್ ಆಗಿದೆ.








