Shivamogga: ಕಾಶ್ಮೀರದ ಪಹಲ್ಗಾಮ್ ಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಹೀನ ಕೃತ್ಯವನ್ನು (Pahalgam terror attack) ಖಂಡಿಸಿ ಶಿವಮೊಗ್ಗದಲ್ಲಿ ಇಂದು ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ವತಿಯಿಂದ ಪ್ರತಿಭಟನೆಗಳು ನಡೆಯಿತು.
ಜಿಲ್ಲಾ ವಕೀಲರ ಸಂಘ, ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಕಮಿಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಉತ್ತರ ಬ್ಲಾಕ್ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದವು.
ವಕೀಲರ ಸಂಘವು ಜಿಲ್ಲಾ ವಕೀಲರ ಭವನದಿಂದ ಬಾಲರಾಜ್ ರಸ್ತೆ ಮೂಲಕ ಟಿ.ಸೀನಪ್ಪ ಶೆಟ್ಟಿ ವೃತ್ತದವರೆಗೆ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಉಗ್ರರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿತು.
ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಕಮಿಟಿಯವರು ಉಗ್ರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರು “ಉಗ್ರರು ಮಾನವೀಯತೆ ಕಳೆದುಕೊಂಡವರಾಗಿದ್ದಾರೆ. ಇವರಿಗೆ ಯಾವುದೇ ಧರ್ಮ ಅಥವಾ ಜಾತಿಯ ಸಂಬಂಧವಿಲ್ಲ. ಸರ್ಕಾರ ಇಂತಹ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ನಡುರಸ್ತೆಯಲ್ಲಿ ಗುಂಡಿಕ್ಕಿ ಕೊಲ್ಲಬೇಕು” ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ ಬಳಿಕ, ಹತ್ಯೆಗೊಳಗಾದವರಿಗೆ ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷ ಮೌನಾಚರಣೆ ನಡೆಯಿತು.
ಇದಲ್ಲದೆ, ಶಿವಪ್ಪನಾಯಕ ವೃತ್ತದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಸದಸ್ಯರು ಪಹಲ್ಗಾಮ್ ನಲ್ಲಿ ಹತ್ಯೆಗೊಂಡ ಮಂಜುನಾಥ್ ರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು ಹಾಗೂ ಇತರ ಮೃತರ ಆತ್ಮಕ್ಕೆ ಶಾಂತಿ ಕೋರಿದರು.