Bengaluru: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ನೇಮಕಾತಿ ಹಗರಣಕ್ಕೆ (PSI recruitment scam) ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಶ್ವತ್ ನಾರಾಯಣ ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸಿದೆ. ಮಾಗಡಿ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಪ್ರಕರಣಕ್ಕೆ ಅಶ್ವತ್ ನಾರಾಯಣ ಸಂಬಂಧವಿದ್ದಾರೆ ಎಂದು ಆರೋಪಿಸಿತ್ತು. ಇದರ ಬೆನ್ನಲ್ಲೇ, ಕಾಂಗ್ರೆಸ್ ಸರ್ಕಾರ ಮರುತನಿಖೆಗೆ ಆದೇಶ ನೀಡಿತ್ತು.
ವಿಚಾರಣೆಗೆ ಹಾಜರಾದ ಮಾಜಿ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ, ಈ ಹಗರಣಕ್ಕೆ ತಾವು ಸಂಬಂಧ ಹೊಂದಿಲ್ಲ ಮತ್ತು ಇದು ರಾಜಕೀಯ ಪ್ರೇರಿತ ಆರೋಪ ಎಂದು ಸ್ಪಷ್ಟನೆ ನೀಡಿದ್ದಾರೆ.
2021 ಅಕ್ಟೋಬರ್ 3ರಂದು ರಾಜ್ಯದ 7 ಜಿಲ್ಲೆಗಳ 93 ಕೇಂದ್ರಗಳಲ್ಲಿ ನೇಮಕಾತಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಹಣದ ಲೇವಾದೇವಿ ಮೂಲಕ ಹುದ್ದೆ ಗಿಟ್ಟಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದವು.
ಹಗರಣದ ತನಿಖೆಯಿಂದ ಬಹಿರಂಗವಾದ ಅಂಶಗಳು
- CID ತನಿಖೆ ನಡೆಸಿದಾಗ ಹಣದ ಹೊಳೆಯೇ ಹರಿದಿರುವುದು ಪತ್ತೆಯಾಯಿತು.
- ಬ್ರೋಕರ್ ಹಂತದಲ್ಲಿ ಕನಿಷ್ಠ ₹10 ಲಕ್ಷ, ನೇಮಕಾತಿ ಅಧಿಕಾರಿಗಳಿಗೆ ₹30-₹35 ಲಕ್ಷ ಲಂಚ ತಲುಪಿದ ಮಾಹಿತಿ ಬಹಿರಂಗವಾಯಿತು.
- 110 ಜನರನ್ನು ಬಂಧಿಸಲಾಗಿದೆ.
- ಐಪಿಎಸ್ ಅಧಿಕಾರಿಯೂ ಬಂಧನಕ್ಕೆ ಒಳಗಾದರು.
2022 ಏಪ್ರಿಲ್‌ನಲ್ಲಿ ಸರ್ಕಾರ ಮರುಪರೀಕ್ಷೆಗೆ ಆದೇಶ ನೀಡಿತು. ಆದರೆ ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೊರೆಹೋದರು. ಹೈಕೋರ್ಟ್ ಅರ್ಜಿ ವಜಾ ಮಾಡಿ ಮರುಪರೀಕ್ಷೆಗೆ ಅನುಮತಿ ನೀಡಿತು. ತದನಂತರ, 117 ಕೇಂದ್ರಗಳಲ್ಲಿ 54,000 ಅಭ್ಯರ್ಥಿಗಳು ಮರುಪರೀಕ್ಷೆ ಬರೆಯಬೇಕಾಯಿತು.