Jharkhand: ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ, ಲೋಕಸಭೆಯ ವಿರೋಧ ಪಕ್ಷದ ನಾಯಕ (Congress MP and Leader of Opposition in Lok Sabha) ರಾಹುಲ್ ಗಾಂಧಿ (Rahul Gandhi) ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಶನಿವಾರ (ಇಂದು) ಜಾರ್ಖಂಡ್‌ಗೆ ಭೇಟಿ ನೀಡಲಿರುವ ಅವರು, ರಾಜ್ಯದಲ್ಲಿ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದಾರೆ. ಸೀಟು ಹಂಚಿಕೆ ಒಪ್ಪಂದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
81 ವಿಧಾನಸಭಾ ಸದಸ್ಯರ ಬಲವಿರುವ ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ರಾಹುಲ್ ಗಾಂಧಿ ಶನಿವಾರ ಮತದಾರರು, ಪಕ್ಷದ ಕಾರ್ಯಕರ್ತರು ಮತ್ತು ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ಸಂವಿಧಾನ್ ಸಮ್ಮಾನ್ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (JMM), ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (RJD) ಒಳಗೊಂಡಿರುವ ಆಡಳಿತಾರೂಢ ಇಂಡಿಯಾ ಒಕ್ಕೂಟ, ಸದ್ಯ ಪ್ರಣಾಳಿಕೆ ಮತ್ತು ಸೀಟು ಹಂಚಿಕೆ ಒಪ್ಪಂದದ ಬಗ್ಗೆ ಚರ್ಚೆ ನಡೆಸುತ್ತಿದೆ.
ಪ್ರತಿಪಕ್ಷ ಬಿಜೆಪಿ ನೇತೃತ್ವದ NDA ಈಗಾಗಲೇ ಸೀಟು ಹಂಚಿಕೆ ಒಪ್ಪಂದವನ್ನು ಪ್ರಕಟಿಸಿದೆ. 81 ಸ್ಥಾನಗಳಲ್ಲಿ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದು, ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘ (AJSU) 10 ಸ್ಥಾನಗಳು, ಜನತಾ ದಳ (ಯುನೈಟೆಡ್) 2 ಸ್ಥಾನಗಳು ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿವೆ.
BJPಯ ಜಾರ್ಖಂಡ್ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ ಅವರು ಶುಕ್ರವಾರ ಎಜೆಎಸ್ಯು ಜೊತೆಗಿನ ಭಿನ್ನಾಭಿಪ್ರಾಯಗಳ ವರದಿಗಳ ಹೊರತಾಗಿಯೂ ಒಪ್ಪಂದವನ್ನು ಘೋಷಿಸಿದರು, ಬಾರ್ಕಗಾಂವ್ ಕ್ಷೇತ್ರವನ್ನು ಬಿಟ್ಟುಕೊಡದೇ ಇರುವುದಕ್ಕೆ AJSU ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.