New Delhi: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ಪ್ರದೇಶ ಸೇರಿದಂತೆ ದೇಶದ ಹಲವೆಡೆ ಮತ ಕಳವು ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಆರೋಪಗಳ ಬಗ್ಗೆ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲು ಕಾಂಗ್ರೆಸ್ ಮುಖಂಡರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ವಜಾ ಮಾಡಿದೆ.
“ಈ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ವಿಚಾರಣೆ ನಡೆಸಲು ಯೋಗ್ಯವಾಗಿಲ್ಲ” ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ ತಿಳಿಸಿದೆ.
ಅರ್ಜಿದಾರರಾದ ಸುಪ್ರೀಂ ವಕೀಲ ರೋಹಿತ್ ಪಾಂಡೆ ಅವರು ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಅವರಿಗೆ ಕೋರ್ಟ್ ತಿಳಿಸಿದಂತೆ, ಬೇಕಾದರೆ ಈ ವಿಷಯವನ್ನು ಚುನಾವಣಾ ಆಯೋಗದ ಮುಂದೆ ಮನವಿ ರೂಪದಲ್ಲಿ ಮಂಡಿಸಬಹುದು.
ಅವರು ಈಗಾಗಲೇ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರೂ ಆಯೋಗ ಕ್ರಮ ಕೈಗೊಂಡಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಅನೇಕ ಅಕ್ರಮ ನಡೆದಿದ್ದು, ಜನರನ್ನು ಬೇಕಾಬಿಟ್ಟಿ ಸೇರ್ಪಡೆ ಅಥವಾ ಅಳಿಸುವ ಮೂಲಕ ಪ್ರಜಾಪ್ರಭುತ್ವದ ಮೂಲವಾದ ಮತದಾನ ಹಕ್ಕು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ಕೋರ್ಟ್ ಯಾವುದೇ ನಿರ್ದೇಶನ ನೀಡದೆ, ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿತು.