Shimla: ಹಿಮಾಚಲ ಪ್ರದೇಶದಲ್ಲಿ(Himachal Pradesh) ಮುಂಗಾರು ಮಳೆ ಅಬ್ಬರ ಇನ್ನೂ ನಿಂತಿಲ್ಲ. ನಿರಂತರ ಮಳೆ, ಮೇಘಸ್ಫೋಟ, ಭೂಕುಸಿತ ಹಾಗೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯ ನಡೆಯುತ್ತಿದ್ದರೂ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳ ಕಾಲ ಇನ್ನಷ್ಟು ಮಳೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಜೂನ್ 20ರಿಂದ ಸೆಪ್ಟೆಂಬರ್ 1ರವರೆಗೆ ರಾಜ್ಯದಲ್ಲಿ ₹3158 ಕೋಟಿ ಹಾನಿಯಾಗಿದೆ. ಕೇವಲ ಕಳೆದ 24 ಗಂಟೆಯ ಮಳೆಯಿಂದಲೇ ₹101 ಕೋಟಿ ನಷ್ಟ ಉಂಟಾಗಿದೆ.
ಮಂಡಿ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದ್ದು, ಇಲ್ಲಿಯವರೆಗೆ ₹1231 ಕೋಟಿ ನಷ್ಟವಾಗಿದೆ. ಬಿಲಾಸ್ಪುರ್, ಚಂಬಾ, ಲಾಹೌಲ್ ಸ್ಪಿಟಿ, ಶಿಮ್ಲಾ, ಸಿರ್ಮೌರ್, ಸೋಲನ್ ಮತ್ತು ಉನಾ ಜಿಲ್ಲೆಗಳಲ್ಲೂ ಭಾರೀ ಹಾನಿಯಾಗಿದೆ.
ಜೂನ್ 20ರಿಂದ ಸೆಪ್ಟೆಂಬರ್ 1ರವರೆಗೆ 326 ಮಂದಿ ಸಾವನ್ನಪ್ಪಿದ್ದು, 41 ಮಂದಿ ಕಣ್ಮರೆಯಾಗಿದ್ದಾರೆ. 385 ಮಂದಿ ಗಾಯಗೊಂಡಿದ್ದಾರೆ. 4,196 ಮನೆಗಳಿಗೆ ಹಾನಿಯಾಗಿದ್ದು, ನೂರಾರು ಅಂಗಡಿಗಳು ಮತ್ತು ಕಾರ್ಖಾನೆಗಳು ಹಾಳಾಗಿವೆ.
ಮಳೆಯಿಂದಾಗಿ 1281 ರಸ್ತೆಗಳು ಬಂದ್ ಆಗಿವೆ, ಅದರಲ್ಲಿ 4 ರಾಷ್ಟ್ರೀಯ ಹೆದ್ದಾರಿಗಳೂ ಸೇರಿವೆ. ಕುಡಿಯುವ ನೀರಿನ 790 ಯೋಜನೆಗಳು ಹಾನಿಗೊಂಡಿವೆ. ಕೃಷಿ, ತೋಟಗಾರಿಕೆ ಹಾಗೂ ವಿದ್ಯುತ್ ಮಂಡಳಿಗೂ ನೂರಾರು ಕೋಟಿ ನಷ್ಟವಾಗಿದೆ.
ಜೂನ್ 1ರಿಂದ ಸೆಪ್ಟೆಂಬರ್ 1ರವರೆಗೆ 852 ಮಿಮೀ ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತ 39% ಹೆಚ್ಚು.
ಶಿಮ್ಲಾ ಹವಾಮಾನ ಕೇಂದ್ರ ರಾಜ್ಯಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ಸೆಪ್ಟೆಂಬರ್ 3ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕಾಂಗ್ರಾ, ಮಂಡಿ, ಸಿರ್ಮೌರ್ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಹೆಚ್ಚಿದ್ದು, ಉಳಿದ ಹಲವಾರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.







