
Bengaluru: ಕೆಲ ದಿನಗಳ ಹಿಂದೆ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ 2024’ ಅನ್ನು ಸಹಿ ಮಾಡದೆ ಹಿಂದಕ್ಕೆ ಕಳುಹಿಸಿದ್ದ ರಾಜ್ಯಪಾಲ (Governor) ಥಾವರ್ಚಂದ್ ಗೆಹ್ಲೋಟ್, (Thaawarchand Gehlot) ಇದೀಗ ಮತ್ತೆರಡು ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ. ಇದರಿಂದ ರಾಜ್ಯಪಾಲರು ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡುವಿನ ಸಂಘರ್ಷ ಮುಂದುವರಿದಿದೆ.
ವಾಪಸ್ ಕಳುಹಿಸಲಾದ ಮಸೂದೆ
- ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆ 2024
- ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ 2024
ಈ ಮಸೂದೆಗಳ ಬಗ್ಗೆ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ.
ರಾಜ್ಯಪಾಲರು ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ಮಸೂದೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ತಿದ್ದುಪಡಿ ಸರಿಯಲ್ಲ ಎಂದು ಹೇಳಿದ್ದಾರೆ. ನಾಮನಿರ್ದೇಶಿತರಿಗೆ ಮತದಾನದ ಹಕ್ಕು ನೀಡಿದರೆ ಸಂಘದ ನಿಯಂತ್ರಣದಲ್ಲಿ ಗೊಂದಲ ಉಂಟಾಗಬಹುದು. ಇದರಿಂದ ಚುನಾಯಿತ ಸದಸ್ಯರ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಮತ್ತು ಸಹಕಾರಿ ಸಂಸ್ಥೆಗಳ ಸ್ವಾಯತ್ತತೆ ದುರ್ಬಲಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಮಸೂದೆ ಸಹಕಾರಿ ಚುನಾವಣಾ ಪ್ರಾಧಿಕಾರ ರದ್ದುಗೊಳಿಸುವ ಪ್ರಸ್ತಾಪವನ್ನು ಒಳಗೊಂಡಿದೆ. ಸಹಕಾರ ಸಂಘಗಳ ಚುನಾವಣಾ ಪ್ರಕ್ರಿಯೆ ಸ್ವಾಯತ್ತವಾಗಿರಬೇಕು ಎಂಬ ಕಾರಣದಿಂದ ಪ್ರಾಧಿಕಾರವನ್ನು ಕಾಯ್ದಿರಿಸಲಾಗಿದೆ. ಆದರೆ ಸರ್ಕಾರ ಆರ್ಥಿಕ ಹೊರೆ ಹೆಸರಿನಲ್ಲಿ ಇದನ್ನು ರದ್ದುಗೊಳಿಸಲು ಮುಂದಾದರೆ, ಇದು ಸರಿಯಲ್ಲ ಎಂಬ ಅಭಿಪ್ರಾಯವನ್ನು ರಾಜ್ಯಪಾಲರು ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯಿಂದ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧ ಮತ್ತಷ್ಟು ಕುತೂಹಲ ಮೂಡಿಸಿದೆ.