
Tumkur: ಸಚಿವ ಕೆ.ಎನ್. ರಾಜಣ್ಣರನ್ನು (Minister K.N. Rajanna) ಸಂಪುಟದಿಂದ ವಜಾ ಮಾಡಿದ ನಿರ್ಧಾರಕ್ಕೆ ತುಮಕೂರಿನಾದ್ಯಂತ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಣಿಗಲ್, ಮಧುಗಿರಿ, ಕೊರಟಗೆರೆ ಸೇರಿದಂತೆ ಹಲವೆಡೆ ಬೆಂಬಲಿಗರು ಕಿಡಿಕಾರಿದ್ದಾರೆ. ಗುಬ್ಬಿಯಿಂದಲೂ ಜನರು ತುಮಕೂರಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಸೇರಿದ್ದಾರೆ.
ತುಮಕೂರಿನ ಟೌನ್ ಹಾಲ್ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿ, ರಾಜಣ್ಣರ ಫೋಟೋ ಇರುವ ಫ್ಲೆಕ್ಸ್ ಹಿಡಿದು ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿವರೆಗೂ ಜಾಥಾ ಮಾಡಿ, ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಮಧುಗಿರಿಯಲ್ಲಿ ಬೆಂಬಲಿಗನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿನ್ನೆಲೆ, ತುಮಕೂರಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ರಾಜಣ್ಣ ವಜಾಕ್ಕೆ ಅಹಿಂದ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ. ಯಾದಗಿರಿಯ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಶ್ರೀಗಳು ರಾಜಣ್ಣರನ್ನು ಷಡ್ಯಂತ್ರ ಮಾಡಿ ವಜಾ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ, ರಾಹುಲ್ ಗಾಂಧಿ ವಿರುದ್ಧ ನೀವು ಸತ್ಯವನ್ನೇ ಹೇಳಿದ್ದೀರಿ, ಯಾರ ಪಿತೂರಿ ಎಂದು ಬಯಲು ಮಾಡಿ ಎಂದು ಸವಾಲು ಹಾಕಿದ್ದಾರೆ. ಬಿವೈ ವಿಜಯೇಂದ್ರ ಸಿಎಂ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ರಾಜಣ್ಣ ವಜಾ ಸರ್ಕಾರಕ್ಕೆ ರಾಜಕೀಯ ತಲೆನೋವು ತಂದಿದ್ದು, ಬೆಂಬಲಿಗರ ಆಕ್ರೋಶ ಹಾಗೂ ವಿಪಕ್ಷದ ಟೀಕೆಗಳು ಸಿದ್ದರಾಮಯ್ಯ ಸರ್ಕಾರವನ್ನು ಒತ್ತಡಕ್ಕೆ ಗುರಿಮಾಡಿವೆ.