Ramanagara : ಕೌಶಾಲಾಭಿವೃದ್ಧಿ ನಿಗಮ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ರಾಮನಗರ ಹೊರವಲಯದ ಬಿಜಿಎಸ್ ಶಾಲೆ ಆವರಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ (Job Fair) ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr. C. N. Ashwathnarayan) ” ಯುವಜನರಿಗೆ ಉದ್ಯೋಗ ಕಲ್ಪಿಸಲು ಮೇಳ ಆಯೋಜಿಸಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸಿಗಲಿದೆ. ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ವಿ.ವಿ. ಸ್ನಾತಕೋತ್ತರ ಕ್ಯಾಂಪಸ್ ನಿರ್ಮಾಣಕ್ಕೆ ₹50 ಕೋಟಿ ವೆಚ್ಚದಲ್ಲಿ ಇದೇ ತಿಂಗಳು ಚಾಲನೆ ನೀಡಲಾಗುವುದು. IIT ಮಾದರಿಯಲ್ಲಿ ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಅಭಿವೃದ್ಧಿ ಮಾಡುವುದರಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ. ಮಾಗಡಿಯಲ್ಲಿ ITI ಅಭಿವೃದ್ದಿ ಜೊತೆಗೆ ಪಾಲಿಟೆಕ್ನಿಕ್ ಗಳಲ್ಲಿ ಹೊಸ ಕೋರ್ಸ್ ಗಳನ್ನು ಆರಂಭ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ Silk Hub ಇದ್ದು, ಉಚಿತ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 75 ಸಾವಿರ ಜನರಿಗೆ ತರಬೇತಿ ನೀಡಲಾಗಿದ್ದು, ಈ ವರ್ಷ ಒಟ್ಟಾರೆ 2.5 ಲಕ್ಷ ಜನರಿಗೆ ಕೌಶಲ ತರಬೇತಿ ನೀಡಲು ಯೋಜಿಸಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಜಿ.ಪಂ. ಸಿಇಒ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಸಂತೋಷ್ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿ.ಪಂ. ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ನಗರಸಭೆ ಅಧ್ಯಕ್ಷೆ ಬಿ.ಸಿ. ಪಾರ್ವತಮ್ಮ, ಆದಿಚುಂಚನಗಿರಿ ಶಾಖಾ ಮಠದ ಕೃಪಾನಂದ ಸ್ವಾಮೀಜಿ, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಿ. ಉಮೇಶ್, ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.