ಭಾರತಕ್ಕೆ ಎಲೆಕ್ಟ್ರಿಕ್ ವಾಹನ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಲ ನೀಡಬಹುದಾದ ದೊಡ್ಡ ಸುದ್ದಿ ಹೊರಬಿದ್ದಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಗುಜರಾತ್ ಹಾಗೂ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಅಪರೂಪದ ಭೂ ಅಂಶಗಳು (Rare Earth Elements) ಇರುವ ನಿಕ್ಷೇಪಗಳು ಪತ್ತೆಯಾಗಿವೆ.
ಕರಾವಳಿಯ ಬೀಚು, ಕೆಂಪು ಮರಳು ಹಾಗೂ ಒಳನಾಡಿನ ಮಣ್ಣಿನಲ್ಲಿ ಸಿಕ್ಕಿರುವ ಮೊನಾಜೈಟ್‌ನಲ್ಲಿ ಸುಮಾರು 8.52 ಮಿಲಿಯನ್ ಟನ್ ರೇರ್ ಅರ್ಥ್ ಎಲಿಮೆಂಟ್‌ಗಳಿವೆ ಎಂದು ಸರ್ಕಾರ ತಿಳಿಸಿದೆ. ಗುಜರಾತ್ ಹಾಗೂ ರಾಜಸ್ಥಾನದ ಕೆಲವು ಬಂಡೆ ಪ್ರದೇಶಗಳಲ್ಲಿ ಕೂಡ 1.29 ಮಿಲಿಯನ್ ಟನ್ ರೇರ್ ಅರ್ಥ್ ಅಂಶಗಳಿವೆ.
ಪರಮಾಣು ಇಂಧನ ಇಲಾಖೆ ಮತ್ತು ಭೂವೈಜ್ಞಾನಿಕ ಸಂಸ್ಥೆಗಳು ದೇಶದಾದ್ಯಂತ ಈ ಅಂಶಗಳ ತಪಾಸಣೆ ಮಾಡುತ್ತಿವೆ. 10 ವರ್ಷಗಳಲ್ಲಿ 18 ಟನ್ ರೇರ್ ಅರ್ಥ್ ಮೈನ್ಸ್ ರಫ್ತು ಮಾಡಲಾಗಿದ್ದು, ಆಮದು ಆಗಿಲ್ಲ.
ಈ ಅಂಶಗಳು ಎಲೆಕ್ಟ್ರಿಕ್ ವಾಹನಗಳು, ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು ಮತ್ತು ರಕ್ಷಣಾ ತಂತ್ರಜ್ಞಾನಗಳಿಗೆ ತುಂಬಾ ಅಗತ್ಯವಾಗಿವೆ. ರೇರ್ ಅರ್ಥ್ ಅಂಶಗಳ ರಫ್ತು ನಿಷೇಧದ ಸವಾಲುಗಳನ್ನು ಎದುರಿಸಲು ಭಾರತ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ.
ಭಾರತದ ಗಣಿ ಸಚಿವಾಲಯ ಆಸ್ಟ್ರೇಲಿಯಾ, ಅರ್ಜೆಂಟೀನಾ, ಜಾಂಬಿಯಾ, ಪೆರು, ಜಿಂಬಾಬ್ವೆ ಮತ್ತು ಇತರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಪರೂಪದ ಖನಿಜಗಳನ್ನು ಭದ್ರಪಡಿಸಿಕೊಳ್ಳಲು ಕ್ರಮ ತೆಗೆದುಕೊಂಡಿದೆ.
ವಿದೇಶಗಳಲ್ಲಿ ಲಿಥಿಯಂ, ಕೋಬಾಲ್ಟ್, ರೇರ್ ಅರ್ಥ್ ಎಲಿಮೆಂಟ್ಸ್ ಮುಂತಾದ ಅಪರೂಪದ ಖನಿಜಗಳಿಗಾಗಿ KABIL ಎಂಬ ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ಭಾರತದ ಪೂರೈಕೆ ಸರಪಳಿಯನ್ನು ಬಲಪಡಿಸಿ, ಎಲೆಕ್ಟ್ರಿಕ್ ವಲಯದ ಬೆಳವಣಿಗೆಗೆ ಅಗತ್ಯ ಮೂಲಸಾಮಗ್ರಿಗಳನ್ನು ಖಚಿತಪಡಿಸಿಕೊಳ್ಳಲು ಈ ಪ್ರಯತ್ನಗಳು ನಡೆಯುತ್ತಿವೆ.
ಭಾರತದಲ್ಲಿ ಸಿಕ್ಕಿರುವ ಅಪರೂಪದ ಭೂಅಂಶಗಳ ನಿಕ್ಷೇಪಗಳು, ದೇಶದ ಎಲೆಕ್ಟ್ರಿಕ್ ವಾಹನ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಭವಿಷ್ಯದಲ್ಲಿ ಬಲ ನೀಡುವ ಶಕ್ತಿ ಹೊಂದಿವೆ.