Delhi: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ (Rekha Gupta) ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಘೋಷಿಸಿದೆ. ಇಂದು (ಫೆಬ್ರವರಿ 20) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಬಹುಮತ ಪಡೆದಿದೆ. ಈ ಹುದ್ದೆಗೆ ಪರ್ವೇಶ್ ವರ್ಮಾ, ಆಶಿಷ್ ಸೂದ್, ಜಿತೇಂದ್ರ ಮಹಾಜನ್, ರೇಖಾ ಗುಪ್ತಾ ಮುಂತಾದವರ ಹೆಸರು ಕೇಳಿ ಬಂದಿದ್ದರೂ, ಕೊನೆಗೆ ರೇಖಾ ಗುಪ್ತಾ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಪರ್ವೇಶ್ ವರ್ಮಾ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ.
ಇದಕ್ಕೂ ಮುನ್ನ ದೆಹಲಿಯಲ್ಲಿ ಸುಷ್ಮಾ ಸ್ವರಾಜ್ (ಬಿಜೆಪಿ), ಶೀಲಾ ದೀಕ್ಷಿತ್ (ಕಾಂಗ್ರೆಸ್), ಅತಿಶಿ (ಆಪ್) ಮಹಿಳಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮಹಿಳಾ ಸಿಎಂ ಆಗಿದ್ದಾರೆ. ಶಾಲಿಮಾರ್ ಬಾಗ್ ಶಾಸಕಿ ಆಗಿರುವ ಅವರು, ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷೆ ಆಗಿದ್ದಾರೆ. ಈ ಚುನಾವಣೆಯಲ್ಲಿ 29,595 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇಂದು ಸಂಜೆ ಬಿಜೆಪಿ ಶಾಸಕರ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಇತರ ಸಂಸದೀಯ ಸದಸ್ಯರು ಮುಖ್ಯಮಂತ್ರಿ ಆಯ್ಕೆಗೆ ಚರ್ಚೆ ನಡೆಸಿದರು. ಈ ಬಾರಿ ದೆಹಲಿಗೆ ಮಹಿಳಾ ಸಿಎಂ ನೇಮಕವಾಗುವ ಸಾಧ್ಯತೆಗಳ ಬಗ್ಗೆ ವರದಿಗಳು ಹರಿದಾಡುತ್ತಿದ್ದವು, ಅದು ಈಗ ನಿಜವಾಗಿದೆ.
ಇಂದು ಫೆಬ್ರವರಿ 20ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಅನೇಕ ಹಿರಿಯ ನಾಯಕರ ಭಾಗವಹಿಸುವ ನಿರೀಕ್ಷೆ ಇದೆ. ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಪ್ರಮಾಣವಚನ ಬೋಧಿಸಲಿದ್ದಾರೆ.
ಈ ಬಾರಿ 70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನ ಗೆದ್ದಿದೆ. ಮತ್ತೆ ಅಧಿಕಾರಕ್ಕೆ ಬರುವ ಆಪ್ ಪಕ್ಷದ ಕನಸು ಭೂಸಾತಲಕ್ಕೆ ಹೋಗಿದೆ. ಕಾಂಗ್ರೆಸ್ ಮತ್ತೊಮ್ಮೆ ಶೂನ್ಯ ಸ್ಥಾನ ಗಳಿಸುವ ಮೂಲಕ ನಿರಾಶೆಯ ಅನುಭವಿಸಿದೆ.