Arunachal Pradesh: ಬಲವಂತದ ಧಾರ್ಮಿಕ ಮತಾಂತರ ತಡೆಗಟ್ಟಲು ಕಾನೂನನ್ನು ಜಾರಿಗೆ ತರಲು ಗುವಾಹಟಿ ಹೈಕೋರ್ಟ್ ಕೆಲವು ತಿಂಗಳ ಹಿಂದೆ ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನು ಅನುಸರಿಸಲು ಅರುಣಾಚಲ ಪ್ರದೇಶ (Arunachal Pradesh)ಸರ್ಕಾರ ಮುಂದಾಗುತ್ತಿದ್ದಂತೆಯೇ, ರಾಜ್ಯದ ಕ್ರಿಶ್ಚಿಯನ್ನರು ಹೈಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಹದಗೆಡದಂತೆ ತಡೆಯಲು ಅಖಿಲ ಭಾರತ ವನವಾಸಿ ಕಲ್ಯಾಣ್ ಆಶ್ರಮ (ABVKA) ರಾಷ್ಟ್ರೀಯ ಅಧ್ಯಕ್ಷ ಸತೇಂದ್ರ ಸಿಂಗ್, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಮಧ್ಯಪ್ರವೇಶಿಸುವಂತೆ ವಿನಂತಿಸಿದ್ದಾರೆ.
ಕೆಲವು ದಿನಗಳಿಂದ ಕ್ರಿಶ್ಚಿಯನ್ನರು ಹೈಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ವರದಿಯಾಗಿದೆ. 1978ರಲ್ಲಿ ಅರುಣಾಚಲ ಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಜಾರಿಗೆ ಬಂದಿತ್ತು. ಈ ಕಾನೂನು ಪ್ರಚೋದನೆ, ದಬ್ಬಾಳಿಕೆ ಅಥವಾ ವಂಚನೆಯ ಮೂಲಕ ಮತಾಂತರವನ್ನು ತಡೆಯಲು ಹಾಗೂ ಮತಾಂತರ ಪ್ರಕರಣಗಳನ್ನು ಸರ್ಕಾರಕ್ಕೆ ದಾಖಲಿಸುವುದಕ್ಕಾಗಿ ಜಾರಿಗೆ ತರಲಾಗಿತ್ತು.
ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿಯೂ ಇಂತಹ ಕಾನೂನುಗಳಿವೆ, ಹಾಗೂ ಸರ್ವೋಚ್ಚ ನ್ಯಾಯಾಲಯವೂ ಈ ಕಾನೂನುಗಳನ್ನು ಸಾಂವಿಧಾನಿಕವಾಗಿ ಮಾನ್ಯತೆ ನೀಡಿದೆ. ಆದರೆ, ಅರುಣಾಚಲ ಪ್ರದೇಶದಲ್ಲಿ ಇದನ್ನು ಸರಿಯಾಗಿ ಜಾರಿಗೆ ತರಲಾಗಿಲ್ಲ ಎಂದು ಎಬಿವಿಕೆಎ ಪತ್ರದಲ್ಲಿ ಉಲ್ಲೇಖಿಸಿದೆ.
1970ರ ದಶಕದಲ್ಲಿ ಶೇಕಡಾ 1ರಷ್ಟಿದ್ದ ಕ್ರಿಶ್ಚಿಯನ್ ಜನಸಂಖ್ಯೆ, 2011ರ ಜನಗಣತಿಯ ಪ್ರಕಾರ ಶೇಕಡಾ 31ಕ್ಕೆ ಏರಿಕೆಯಾಗಿದೆ. ಈ ಅಂಕಿ-ಅಂಶಗಳ ಮೂಲಕ ಹಿಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಸ್ಪಷ್ಟವಾಗುತ್ತದೆ. ಸೆಪ್ಟೆಂಬರ್ 30, 2024ರಂದು ಗುವಾಹಟಿ ಹೈಕೋರ್ಟ್ ಇಟಾನಗರ ಶಾಶ್ವತ ಪೀಠ ಈ ಕುರಿತು ಹಲವು ನಿರ್ದೇಶನಗಳನ್ನು ನೀಡಿತ್ತು.
ಹೈಕೋರ್ಟ್ ಆದೇಶದ ಅನುಸಾರ 6 ತಿಂಗಳೊಳಗೆ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರಬೇಕಿತ್ತು. ಆದರೆ, ಹೈಕೋರ್ಟ್ ಆದೇಶವನ್ನು ಜಾರಿಗೆ ತರಲು ಸರ್ಕಾರ ಮುಂದಾಗುತ್ತಿದ್ದಂತೆಯೇ ಕ್ರಿಶ್ಚಿಯನ್ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ಬಲವಂತದ ಮತಾಂತರ ತಡೆಗಟ್ಟಲು ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಪ್ರತಿಭಟನೆ ನಡೆಯುವುದು ಗಂಭೀರ ವಿಚಾರ. ಕಳೆದ 50 ವರ್ಷಗಳಲ್ಲಿ ಬುಡಕಟ್ಟು ಸಮುದಾಯದ ಅರ್ಧಕ್ಕೂ ಹೆಚ್ಚು ಜನರು ಮತಾಂತರಗೊಂಡಿದ್ದಾರೆ. ಈ ಪರಿಸ್ಥಿತಿಗೆ ಯಾರು ಹೊಣೆ ಎಂದು ಎಬಿವಿಕೆಎ ಪ್ರಶ್ನಿಸಿದೆ.
15 ಲಕ್ಷ ಜನಸಂಖ್ಯೆ ಹೊಂದಿರುವ ಈ ರಾಜ್ಯದಲ್ಲಿ, ಅಡೆತಡೆ ಇಲ್ಲದೇ ಮತಾಂತರಗೊಳ್ಳುತ್ತಿರುವವರಿಂದ ಹೈಕೋರ್ಟ್ ಆದೇಶಕ್ಕೂ ಧಿಕ್ಕಾರ ಮೂಡುತ್ತಿದೆ.
ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮ ಹಾಗೂ ದೇಶದ ಸಮಸ್ತ ಬುಡಕಟ್ಟು ಸಮುದಾಯದ ಪರವಾಗಿ, ಬಲವಂತದ ಮತಾಂತರ ತಡೆಗಟ್ಟುವ ಕಾನೂನನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಎಬಿವಿಕೆಎ ಆಗ್ರಹಿಸಿದೆ. ಕೇಂದ್ರ ಸರ್ಕಾರ ಹಾಗೂ ಗೃಹ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಪರಿಸ್ಥಿತಿ ಹದಗೆಡದಂತೆ ತಡೆಯಬೇಕು ಎಂದು ಆಶ್ರಮ ಪತ್ರದ ಮೂಲಕ ವಿನಂತಿಸಿದೆ.