
ಡಾಲಿ ಧನಂಜಯ್, (Dolly Dhananjay) ಒಳ್ಳೆಯ ನಟ ಮತ್ತು ನಿರ್ಮಾಪಕವಾಗಿರುವ ಜೊತೆಗೆ, ಸಾಮಾಜಿಕ ಕಾಳಜಿಯ ವ್ಯಕ್ತಿಯಾಗಿ ಪ್ರಸಿದ್ಧಿ ಗಳಿಸಿದ್ದಾರೆ. ತಮ್ಮ ವಿವಾಹದ ಮುನ್ನ, ಒಂದು ಮಹತ್ವದ ಸಾಮಾಜಿಕ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಹುಟ್ಟೂರಾದ ಕಾಳೇನಹಳ್ಳಿಯ 1ರಿಂದ 7ನೇ ತರಗತಿವರೆಗೆ ನಡೆಯುವ ಸರ್ಕಾರಿ ಶಾಲೆಯ (Government School) ನವೀಕರಣಕ್ಕೆ ಮುಂದಾಗಿದ್ದಾರೆ.
ಶಾಲೆಯ ಹಳಸಿದ ಗೋಡೆಗಳು, ಬಿರಕಿದ್ದ ತಾರಸು, ಕುಸಿದ ನೆಲಹಾಸು ಮತ್ತು ದುರಸ್ಥಿಯ ಅಗತ್ಯವಿದ್ದ ಶೌಚಾಲಯಗಳೆಲ್ಲವನ್ನು ಹೊಸ ರೂಪಕ್ಕೆ ತರಲು ಡಾಲಿ ಧನಂಜಯ್ ತಮ್ಮ ಸ್ವಂತ ಹಣವನ್ನು ಬಳಸುತ್ತಿದ್ದಾರೆ. ಹೊಸ ಟೈಲ್ಸ್, ಬಣ್ಣ, ಶುದ್ಧ ಕುಡಿಯುವ ನೀರಿನ ಫಿಲ್ಟರ್, ಸುಸಜ್ಜಿತ ಅಡುಗೆಮನೆ, ಗೇಟ್ ಮತ್ತು ಕಾಂಪೌಂಡ್ ದುರಸ್ತಿ ಸೇರಿದಂತೆ ಶಾಲೆಗೆ ಸಂಪೂರ್ಣ ನವೀಕರಣ ಮಾಡುತ್ತಿದ್ದಾರೆ.
ಡಾಲಿ ಧನಂಜಯ್ ಸ್ವತಃ ಶಾಲೆಗೆ ಭೇಟಿ ನೀಡಿ, ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರೊಂದಿಗೆ ಚರ್ಚೆ ನಡೆಸಿ, ಅಗತ್ಯತೆಗಳನ್ನು ಪರಿಶೀಲಿಸಿ ಕಾರ್ಯಾರಂಭ ಮಾಡಿಸಿದ್ದಾರೆ. ದುರಸ್ತಿ ಮತ್ತು ಮರುನಿರ್ಮಾಣ ಕಾರ್ಯ ಈಗಾಗಲೇ ಪ್ರಗತಿಯಲ್ಲಿದ್ದು, ಕೆಲವೇ ವಾರಗಳಲ್ಲಿ ಈ ಶಾಲೆಗೆ ಹೊಸ ರೂಪ ಸಿಗಲಿದೆ.
ಈ ಕಾರ್ಯಕ್ಕೆ ಊರಿನ ಜನರು ಮತ್ತು ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ದೊರೆತಿದೆ. ಸಾಮಾಜಿಕ ವಿಚಾರಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವ ಡಾಲಿ ಧನಂಜಯ್, ಕನ್ನಡ ಮತ್ತು ರೈತ ಪರ ಕೆಲಸಗಳಲ್ಲಿ ವಿಶೇಷವಾಗಿ ಸಕ್ರಿಯರಾಗಿದ್ದಾರೆ.
ಡಾಲಿ ಧನಂಜಯ್ ವೈದ್ಯೆ ಧನ್ಯತಾಳೊಂದಿಗೆ ಫೆಬ್ರವರಿ 16ರಂದು ಮೈಸೂರಿನಲ್ಲಿ ವಿವಾಹ ಗೈಯಲಿದ್ದಾರೆ. ಈ ನಡುವೆ, ತನ್ನ ಸಿನಿಮಾಗಳು ಮತ್ತು ನಿರ್ಮಾಣ ಕಾರ್ಯಗಳಲ್ಲಿಯೂ ಬ್ಯುಸಿಯಾಗಿದ್ದಾರೆ.
ಡಾಲಿ ಧನಂಜಯ್ ಅವರು ಮಾಡುತ್ತಿರುವ ಈ ಸಾಮಾಜಿಕ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದ್ದು, ಕಾಳೇನಹಳ್ಳಿಯ ಸರ್ಕಾರಿ ಶಾಲೆ ಆಧುನಿಕ ರೀತಿಯಲ್ಲಿ ಪುನಃ ಜೀವ ಸೇರುತ್ತಿರುವುದು ಸಂತೋಷದ ವಿಷಯ.