ಕನ್ನಡ ಸಾಹಿತ್ಯದ ಮೇರು ಸಾಹಿತಿ, ಪದ್ಮಭೂಷಣ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ (Dr. SL Bhyrappa)ಅವರ ನಿಧನ ಇಡೀ ದೇಶವನ್ನು ದುಃಖಿತಗೊಳಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭೈರಪ್ಪ ಅವರ ಕೃತಿಗಳು ಕನ್ನಡ ಸಂಸ್ಕೃತಿಯ ಬೇರುಗಳಿಗೆ ಬದ್ಧವಾಗಿದ್ದು, ಸಾಹಿತ್ಯವನ್ನು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟಕ್ಕೆ ಕೊಂಡೊಯ್ದವು ಎಂದು ಕೊಂಡಾಡಿದ್ದಾರೆ. ಅವರು ಮುಂದಿನ ಪೀಳಿಗೆಗೆ ಶಾಶ್ವತ ಸ್ಫೂರ್ತಿಯಾಗಿದ್ದಾರೆಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಕನ್ನಡಕ್ಕೆ ʼಸರಸ್ವತಿ ಸಮ್ಮಾನ್ʼ ತಂದುಕೊಟ್ಟ ಭೈರಪ್ಪ ಅವರ ಅಗಲಿಕೆಯಿಂದ ಸಾರಸ್ವತ ಲೋಕ ಬಡವಾಗಿದೆ ಎಂದು ಶೋಕ ವ್ಯಕ್ತಪಡಿಸಿದರು. ಅವರ ಸಂಶೋಧನೆ, ಇತಿಹಾಸ ಅಧ್ಯಯನ ಮತ್ತು ರಾಷ್ಟ್ರೀಯತೆಯ ಚಿಂತನೆಗಳಿಂದ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ದೊರಕಿದೆ ಎಂದು ಸ್ಮರಿಸಿದರು.
ಡಾ. ಪುರುಷೋತ್ತಮ ಬಿಳಿಮಲೆ ಅವರು, ಭೈರಪ್ಪನವರ ಕಾದಂಬರಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ದೊಡ್ಡ ಪ್ರಭಾವ ಬೀರಿದವು ಎಂದು ನೆನಪಿಸಿಕೊಂಡರು. “ಮಾನವನ ದೌರ್ಬಲ್ಯಗಳ ಮೇಲೆ ಅವರಿಗೆ ಅಪಾರ ಅನುಕಂಪವಿತ್ತು. ಕಾಮ ಮತ್ತು ಸಂತಾನವನ್ನು ಅವರಂತೆ ಆಳವಾಗಿ ವಿಶ್ಲೇಷಿಸಿದ ಮತ್ತೊಬ್ಬ ಲೇಖಕ ಕನ್ನಡದಲ್ಲಿ ಇಲ್ಲ” ಎಂದು ಹೇಳಿದರು. ಅವರ ನಿಧನದಿಂದ ಕನ್ನಡದ ಮಹಾನ್ ಸಾಹಿತಿ ಒಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.