Bengaluru: ಅಗತ್ಯ ದಾಖಲೆಗಳಿಲ್ಲದೇ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆಗೆ ನೀಡಿದ 23 ಮನೆ ಮಾಲೀಕರ ವಿರುದ್ಧ ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಾಸ್‌ಪೋರ್ಟ್, ವೀಸಾ ವಿವರಗಳನ್ನು 24 ಗಂಟೆಯೊಳಗೆ indianfrro.gov.in ನಲ್ಲಿ ಸಲ್ಲಿಸಿ, ಎಫ್ಆರ್ಆರ್ಓ ಮೂಲಕ “ಸಿ-ಫಾರ್ಮ್” ಪಡೆದು ಸ್ಥಳೀಯ ಠಾಣೆಗೆ ಕೊಡುವುದು ಕಡ್ಡಾಯ. ಆದರೆ ಈ ನಿಯಮ ಪಾಲಿಸದೇ ಮನೆ ಬಾಡಿಗೆಗೆ ನೀಡಿದ್ದರಿಂದ ರಿಜಿಸ್ಟ್ರೇಷನ್ ಆಫ್ ಫಾರಿನರ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಅಮೃತಹಳ್ಳಿ, ಬಾಗಲೂರು, ಸಂಪಿಗೆಹಳ್ಳಿ, ವಿದ್ಯಾರಣ್ಯಪುರ, ಚಿಕ್ಕಜಾಲ, ಕೊಡಿಗೆಹಳ್ಳಿ, ಯಲಹಂಕ ನ್ಯೂಟೌನ್, ಕೊತ್ತನೂರು ಹಾಗೂ ಯಲಹಂಕ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅನೇಕ ವಿದೇಶಿಗರು ವೀಸಾ ಮುಗಿದ ಬಳಿಕವೂ ಅಕ್ರಮವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿರುವುದು ಪತ್ತೆಯಾಗಿದೆ.
2025ರ ಮಾರ್ಚ್ ವರೆಗೂ ಒಟ್ಟು 70 ಪ್ರಕರಣಗಳು ದಾಖಲಾಗಿ, 42 ವಿಚಾರಣೆಯ ಹಂತದಲ್ಲಿವೆ. 26 ತನಿಖೆಯ ಹಂತದಲ್ಲಿದ್ದು, ಒಂದು ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ.
ಮಾರ್ಚ್‌ನಲ್ಲಿ, ವೀಸಾ ಅವಧಿ ಮುಗಿದರೂ ಬೆಂಗಳೂರಿನ ಹೆಬ್ಬಾಳದಲ್ಲಿ ವಾಸಿಸುತ್ತಿದ್ದ ಅರ್ಜೆಂಟೀನಾ ಹಾಗೂ ಬ್ರೆಜಿಲ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ, ಸಿ-ಫಾರ್ಮ್ ಸಲ್ಲಿಸದ ಹಿನ್ನೆಲೆಯಲ್ಲಿ ಮನೆ ಮಾಲೀಕರ ಹಾಗೂ ಮಾಡೆಲಿಂಗ್ ಏಜೆನ್ಸಿ ಪ್ರತಿನಿಧಿಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು.