Devanahalli: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ರೆವಿನ್ಯೂ ಇನ್ಸ್‌ಪೆಕ್ಟರ್ (ಆರ್ಐ) ಹೇಮಂತ್ ಕುಮಾರ್ ಮುಜರಾಯಿ ಇಲಾಖೆಯ (Muzrai department) 63 ಲಕ್ಷ ರೂಪಾಯಿ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆಯಲ್ಲಿ ಹಿಂದಿನ ಅನುಭವ ಹೊಂದಿದ್ದ ಅವರು, 2023 ರಿಂದ ತಹಶೀಲ್ದಾರ್‌ಗಳ ಸಹಿಯನ್ನು ನಕಲು ಮಾಡುತ್ತಾ ಹಣ ಕದ್ದುಕೊಂಡಿದ್ದಾರೆ.
ಮುಜರಾಯಿ ಇಲಾಖೆಯ ದೇವಾಲಯದಿಂದ ಸರ್ಕಾರಕ್ಕೆ ಹಣ ಜಮಾ ಆಗಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ ತನಿಖೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರ್ಐ ಹೇಮಂತ್ ಅವರನ್ನು ಬಂಧಿಸಿದ್ದಾರೆ.
RI ಹೇಮಂತ್ ಅವರು ಹಣವನ್ನು ಬೇರೊಬ್ಬ ಮಹಿಳೆಯ ಕೆನರಾ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ವರ್ಗಾಯಿಸಿದ್ದು, ಬಳಿಕ ಅದು ಮತ್ತೊಂದು ಖಾತೆಗೆ ಪರಿವರ್ತನೆಗೊಂಡಿದೆ. ಅವರು ಈ ಹಣದಿಂದ ಸೈಟ್ ಖರೀದಿ ಹಾಗೂ ಮನೆ ನಿರ್ಮಾಣ ಮಾಡಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.
ಇಲ್ಲಿಯವರೆಗೆ ವಿವಿಧ ಖಾತೆಗಳಿಂದ ಹಣ ವಶಪಡಿಸಿಕೊಳ್ಳಲಾಗಿದ್ದು, ಹೇಮಂತ್ ಅವರ ವಿರುದ್ಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ, ಇನ್ನೂ ಹೆಚ್ಚಿನ ಅಕ್ರಮಗಳು ನಡೆದಿದೆಯೇ ಎಂಬುದು ಸ್ಪಷ್ಟವಾಗಲಿದೆ.