Patna: ಬಿಹಾರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಪಾಟ್ನಾದಲ್ಲಿ RJD (ರಾಷ್ಟ್ರೀಯ ಜನತಾ ದಳ) ನಾಯಕ ರಾಜ್ಕುಮಾರ್ ರೈ ಅಲಿಯಾಸ್ ಅಲ್ಲಾ ರೈ ಅವರನ್ನು ಗುರುವಾರ ರಾತ್ರಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ಚಿತ್ರಗುಪ್ತದ ಮುನ್ನಾಚಕ್ ಪ್ರದೇಶದಲ್ಲಿ ನಡೆದಿದೆ.
ರಾಜ್ಕುಮಾರ್ ರೈ ರಾಘೋಪುರ್ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದ್ದು, ಕೊಲೆ ಪ್ರಕರಣದಿಂದ ಚುನಾವಣಾ ವಾತಾವರಣದಲ್ಲಿ ಆತಂಕ ಉಂಟಾಗಿದೆ. ಪ್ರಾಥಮಿಕ ಮಾಹಿತಿಯಂತೆ ಭೂ ವಿವಾದವೇ ದಾಳಿಗೆ ಕಾರಣವಾಗಿರಬಹುದು. ರೈ ಭೂ ವ್ಯವಹಾರಗಳಲ್ಲೂ ತೊಡಗಿಸಿಕೊಂಡಿದ್ದರು.
ಘಟನೆಯ ನಂತರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಮೃತರೆಂದು ಘೋಷಿಸಿದರು. ಸ್ಥಳದಿಂದ ಆರು ಕ್ಯಾಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಇಬ್ಬರು ಆರೋಪಿಗಳು ಅಪರಾಧ ಎಸಗಿ ಸ್ಥಳದಿಂದ ಪರಾರಿಯಾದರು.
ಪಾಟ್ನಾ ಪೂರ್ವ SP ಪರಿಚಯ್ ಕುಮಾರ್ ಅವರ ಪ್ರಕಾರ, ಕೊಲೆ ಪೂರ್ವಯೋಜಿತವಾಗಿದ್ದು, ದಾಳಿಕೋರರು ರೈ ಚಟುವಟಿಕೆಗಳ ಬಗ್ಗೆ ಮುಂಚಿತ ಮಾಹಿತಿ ಪಡೆದಿದ್ದರು. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದು, ತನಿಖೆ ಮುಂದುವರಿದಿದೆ.
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಘಟನೆ ಕೆಲವೇ ಕ್ಷಣದಲ್ಲಿ ನಡೆದಿದೆ. ಪೊಲೀಸರು ಅವರ ಹೇಳಿಕೆಗಳನ್ನು ದಾಖಲಿಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.