ಭಾರತದ ಏಕದಿನ ನಾಯಕತ್ವ ಕುರಿತು ಕೆಲ ದಿನಗಳಿಂದ ವದಂತಿಗಳು ಹರಿದಾಡುತ್ತಿವೆ. ರೋಹಿತ್ ಶರ್ಮಾ ಬದಲಿಗೆ ಶ್ರೇಯಸ್ ಅಯ್ಯರ್ ಅಥವಾ ಶುಭಮನ್ ಗಿಲ್ ಅವರಿಗೆ ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ವಿಷಯಕ್ಕೆ ತೆರೆ ಎಳೆದಿದ್ದಾರೆ. “ರೋಹಿತ್ ಶರ್ಮಾನೇ ಪ್ರಸ್ತುತ ನಮ್ಮ ಏಕದಿನ ನಾಯಕ. ಈ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಮುಂದಿನ ವಿಶ್ವಕಪ್‌ವರೆಗೆ ಅವರು ನಾಯಕತ್ವ ವಹಿಸುವ ಸಾಧ್ಯತೆ ಇದೆ.
ಏಕದಿನ ಮಾದರಿಯಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡಿರುವುದರಿಂದ ಅವರು ನಾಯಕತ್ವದ ಸ್ಪರ್ಧೆಯಲ್ಲಿ ಇದ್ದಾರೆ. ಐಪಿಎಲ್‌ನಲ್ಲಿ ಸಹ ಅವರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವವಿದೆ.
ಶುಭಮನ್ ಗಿಲ್ ಪ್ರಸ್ತುತ ಉಪನಾಯಕರು. ಅವರು ಇತ್ತೀಚೆಗೆ ಟೆಸ್ಟ್ ನಾಯಕರಾಗಿ ನೇಮಕಗೊಂಡು ಉತ್ತಮವಾಗಿ ಆಡುತ್ತಿದ್ದಾರೆ. ಗಿಲ್‌ನ ಸರಾಸರಿ ಏಕದಿನಗಳಲ್ಲಿ 59 ರನ್ ಆಗಿದ್ದು, ಯುವ ಆಟಗಾರರಾಗಿರುವುದರಿಂದ ಭವಿಷ್ಯದಲ್ಲಿ ನಾಯಕತ್ವದ ಅವಕಾಶ ಅವರಿಗೆ ಸಿಗಬಹುದು ಎಂದು ಮೂಲಗಳು ಹೇಳಿವೆ.
ಏಷ್ಯಾಕಪ್ ತಂಡದಲ್ಲಿ ಬದಲಾವಣೆ: ಮುಂದಿನ ತಿಂಗಳು ನಡೆಯಲಿರುವ ಟಿ-20 ಏಷ್ಯಾಕಪ್‌ಗೆ 15 ಸದಸ್ಯರ ಭಾರತೀಯ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಲಿದ್ದು, ಗಿಲ್ ಅವರನ್ನು ಉಪನಾಯಕನನ್ನಾಗಿ ಮಾಡಿದ್ದಾರೆ. ಆದರೆ ಉತ್ತಮ ಫಾರ್ಮ್ನಲ್ಲಿದ್ದರೂ ಶ್ರೇಯಸ್ ಅಯ್ಯರ್ ಅವರನ್ನು ತಂಡದಲ್ಲಿ ಸೇರಿಸದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.