Gadag: ಗದಗ (Gadag) ನಗರದ ಜುಮ್ಮಾ ಮಸೀದಿ ಬಳಿ ಗುರುವಾರ ಸಂಜೆ ಪುಡಿ ರೌಡಿಗಳ ಅಟ್ಟಹಾಸದಿಂದ ಆರು ಜನರಿಗೆ ಚಾಕು ಇರಿತವಾಗಿದೆ. ಗಾಯಾಳುಗಳಲ್ಲಿ ಅನಿಲ್ ಮುಳ್ಳಾಳ್ (27) ಮತ್ತು ವಿನಾಯಕ್ ಮುಳ್ಳಾಳ್ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅನಿಲ್ ಮುಳ್ಳಾಳ (27), ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಶಾರುಖ್ ಮುಲ್ಲಾ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ ಹೀಗೆ ಆರು ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ.
ಡಿಸೆಂಬರ್ 20ರಂದು ಚೇತನ್ ಮುಳ್ಳಾಳ್ ಮತ್ತು ನಿಸಾರ್ ಅಹ್ಮದ್ ನಡುವಿನ ಗಲಾಟೆ ಈ ದಾಳೆಗೆ ಕಾರಣವಾಗಿದೆ. ಆರು ದಿನಗಳ ನಂತರ, ಡಿಸೆಂಬರ್ 26ರಂದು ಜುಮ್ಮಾ ಮಸೀದಿ ಬಳಿ ಮತ್ತೆ ಗಲಾಟೆ ಉಲ್ಬಣಗೊಂಡಿದೆ. ನಿಸಾರ್ ತನ್ನ ತಂಡದ ಜೊತೆ ಅನಿಲ್ ಮತ್ತು ಇನ್ನಿತರರ ಮೇಲೆ ಹಲ್ಲೆ ನಡೆಸಿದ್ದಾನೆ.
ನಿಸಾರ್ ಅನಿಲ್ ಕುತ್ತಿಗೆಗೆ ಸ್ಕ್ರೂ ಡ್ರೈವರ್ ಚುಚ್ಚಿದ್ದಾನೆ. ಇತರ ಐದು ಜನರಿಗೂ ಚಾಕುವಿನಿಂದ ಇರಿತ ಮಾಡಲಾಗಿದೆ. ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಅಭಿಷೇಕ್ ಮತ್ತು ಕಿರಣ್ ಮೇಲೂ ದಾಳಿ ನಡೆದಿದೆ.
ಘಟನೆಯಲ್ಲಿ 20-30 ಯುವಕರ ಗುಂಪು ಭಾಗಿಯಾಗಿದ್ದು, ಶ್ರೀರಾಮ ಸೇನೆಯ ಸಕ್ರಿಯ ಸದಸ್ಯ ಅನಿಲ್‌ಗೆ ಗುರಿಯಾಗಿ ಹಲ್ಲೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಗೆ ಹೆಚ್ಚುವರಿ ಎಸ್ಪಿ ಎಂಬಿ ಸಂಕದ, ಡಿವೈಎಸ್ಪಿ ಪ್ರಭುಗೌಡ, ಮತ್ತು ಸಿಪಿಐ ಸಿದ್ದರಾಮೇಶ್ವರ ಭೇಟಿ ನೀಡಿ ಘಟನೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ಗದಗ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.