
Bengaluru: ಕರ್ನಾಟಕದಲ್ಲಿ ನಂದಿನಿ ಹಾಲು, ಮೆಟ್ರೋ ಟಿಕೆಟ್, ವಿದ್ಯುತ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ಬೆನ್ನಲೆ, ಇದೀಗ ಖಾಸಗಿ ಶಾಲೆಗಳ ವಾಹನ ಶುಲ್ಕವೂ (School bus fare hike) ಹೆಚ್ಚಳವಾಗುತ್ತಿದೆ. ಇದರಿಂದ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಖಾಸಗಿ ಶಾಲೆಗಳು ಈಗಾಗಲೇ 15% ರಿಂದ 20%ರ ವರೆಗೆ ಟ್ಯೂಷನ್ ಫೀಸ್ ಹೆಚ್ಚಿಸಿವೆ. ಈಗ ಅದಕ್ಕೆ ಜೊತೆಗೆ ಶಾಲಾ ಬಸ್ ಶುಲ್ಕವೂ ಹೆಚ್ಚಳವಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯ ನೆಪವಿಟ್ಟು, ಬಸ್ ಮಾಲೀಕರು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 500 ರಿಂದ 600 ರೂ. ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾಗಿದ್ದಾರೆ.
ಖಾಸಗಿ ಶಾಲಾ ಬಸ್ ಸಂಘಟನೆಯ ಅಧ್ಯಕ್ಷ ಷಣ್ಮುಗಮ್ ಹೇಳಿದ್ದಾರೆ: “ಸರ್ಕಾರದ ನೀತಿಗಳಿಂದ ಡೀಸೆಲ್ ಬೆಲೆ ಲೀಟರ್‌ಗೆ 2 ರೂ. ಹೆಚ್ಚಾಗಿದೆ. ಬಸ್ ಬಾಗಪಾಟಿ, ಇನ್ಶೂರೆನ್ಸ್ ದರಗಳೂ ಏರಿಕೆಯಾಗಿದೆ. ಅದರಿಂದಾಗಿ ಬಸ್ ಸೇವೆಗಳ ದರ ಹೆಚ್ಚುವುದು ಅನಿವಾರ್ಯವಾಗಿದೆ. ಆದರೂ ಪೋಷಕರಿಗೆ ಹೆಚ್ಚು ಹೊರೆ ಆಗದಂತೆ ಹೊಸ ದರ ನಿರ್ಧರಿಸಲು ಚರ್ಚೆ ನಡೆಯುತ್ತಿದೆ.”
ಇದೇ ವರ್ಷದಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ. ಸದ್ಯ 2000–2100 ರೂ. ಆಗಿರುವ ಬಸ್ ಶುಲ್ಕ, 2500–3000 ರೂ. ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಮಧ್ಯಮ ವರ್ಗದ ಪೋಷಕರು ಈ ದರ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪೋಷಕಿ ಶೀತಲ್ ಹೇಳುವಂತೆ: “ಶಾಲಾ ಶುಲ್ಕ, ಪುಸ್ತಕದ ಬೆಲೆ, ಈಗ ಬಸ್ ಶುಲ್ಕ ಎಲ್ಲವೂ ಏರಿಕೆಯಾಗುತ್ತಿದೆ. ಇದು ನಾವು ತಾಳಬಲ್ಲ ಮಟ್ಟದ ಹೊರೆಯಾಗುತ್ತಿಲ್ಲ. ಸರ್ಕಾರ ಅಥವಾ ಶಾಲೆಗಳು ನಮ್ಮ ಸಮಸ್ಯೆ ಕುರಿತು ಯೋಚಿಸಬೇಕು.”
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಾಸಗಿ ಶಾಲಾ ಬಸ್ ಶುಲ್ಕಕ್ಕೂ ಹೊಡೆತ ನೀಡಿದ್ದು, ಇದರ ಪರಿಣಾಮವಾಗಿ ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಗಂಭೀರ ಆರ್ಥಿಕ ಒತ್ತಡ ಎದುರಾಗುತ್ತಿದೆ.