New Delhi: ವೈವಾಹಿಕ ಪ್ರಕರಣಗಳಲ್ಲಿ ಪತಿ ಅಥವಾ ಪತ್ನಿ ರಹಸ್ಯವಾಗಿ ರೆಕಾರ್ಡ್ ಮಾಡಿರುವ ಸಂಭಾಷನೆಗಳನ್ನು ಈಗಿನಿಂದ ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಬಳಸಬಹುದು ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ತೀರ್ಪು ನೀಡಿದೆ.
ಪತಿ-ಪತ್ನಿಯ ನಡುವಿನ ಅನುಮಾನವು ಸಂಬಂಧ ಮುರಿಯುವ ಲಕ್ಷಣವಾಗಿದೆ. ಇಂತಹ ಸಂದರ್ಭಗಳಲ್ಲಿ ರೆಕಾರ್ಡ್ ಮಾಡಿದ ಮಾತುಗಳು ನ್ಯಾಯಾಂಗ ವಿಚಾರಣೆಗೆ ಸಹಾಯವಾಗಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ತೀರ್ಪು ನೀಡಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊದಲು ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್, ಪತಿ-ಪತ್ನಿಯ ನಡುವಿನ ರಹಸ್ಯ ಸಂಭಾಷಣೆಗಳು ಸಾಕ್ಷ್ಯ ಕಾಯ್ದೆ ಸೆಕ್ಷನ್ 122 ಅಡಿಯಲ್ಲಿ ರಕ್ಷಿತವಾಗಿವೆ, ಎಂದು ಹೇಳಿತ್ತು.
ಆದರೆ ಸುಪ್ರೀಂ ಕೋರ್ಟ್, ಅಂತಹ ರೆಕಾರ್ಡಿಂಗ್‌ಗಳನ್ನು ಕುಟುಂಬ ನ್ಯಾಯಾಲಯದಲ್ಲಿ ಪರಿಗಣಿಸಬಹುದು ಎಂದು ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದಾಗಿ, ಭಟಿಂಡಾದ ಪತಿ ನೀಡಿದ ಫೋನ್ ರೆಕಾರ್ಡಿಂಗ್‌ಗಳು ಇದೀಗ ಪುರಾವೆಯಾಗಿ ಪರಿಗಣಿಸಲಾಗುತ್ತವೆ.
ಹೈಕೋರ್ಟ್ ಹೇಳಿದ್ದಂತೆ, ರಹಸ್ಯ ರೆಕಾರ್ಡಿಂಗ್ ಪತ್ನಿಯ ಗೌಪ್ಯತೆಯನ್ನು ಉಲ್ಲಂಘಿಸುತ್ತವೆ ಎಂಬ ವಾದವನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪತಿಯು ತಾನು ಪುರಾವೆ ಹೊಂದಿರುವ Compact Disc ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ. ಪತ್ನಿಯು ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಳು.
ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ಸಂಗಾತಿಗಳು ಪರಸ್ಪರ ಅನುಮಾನಿಸುವ ಮಟ್ಟಕ್ಕೆ ಸಂಬಂಧ ತಲುಪಿದರೆ, ಅದು ನಂಬಿಕೆ ಇಲ್ಲದ ಸಂಬಂಧವಾಗಿದ್ದು, ಅಲ್ಲಿ ಈ ರೀತಿ ಪುರಾವೆಗಳನ್ನು ಪರಿಗಣಿಸುವುದು ತಪ್ಪಲ್ಲ.