Peshawar: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ (Khyber Pakhtunkhwa) ಭದ್ರತಾ ಪಡೆ ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೌಂಟರ್ ಟೆರರಿಸಂ ಡಿಪಾರ್ಟ್ಮೆಂಟ್ (CTD) ಲಕ್ಕಿ ಮಾರ್ವತ್ ಜಿಲ್ಲೆಯಲ್ಲಿಯೇ ಈ ಕಾರ್ಯಾಚರಣೆ ನಡೆಸಿ, ಉಗ್ರರನ್ನು ಹೊಡೆದುರುಳಿಸಿದೆ. ಮೃತ ಉಗ್ರರು ನಾಗರಿಕರು ಹಾಗೂ ಸೈನಿಕರ ಮೇಲಿನ ದಾಳಿಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಖೈಬರ್ ಪಖ್ತುಂಖ್ವಾ ಐನ್ಸ್‌ಪೆಕ್ಟರ್ ಜನರಲ್ ಜುಲ್ಪಿಕರ್ ಹಮೀದ್ ಈ ಯಶಸ್ವಿ ಕಾರ್ಯಾಚರಣೆಗೆ ಸಿಟಿಡಿಗೆ ಶ್ಲಾಘನೆ ನೀಡಿದ್ದಾರೆ. ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಅಕೋರಾ ಖಟ್ಟಕ್ ಹಾಗೂ ಬನ್ನು ಕಂಟೋನ್ಮೆಂಟ್ ಪ್ರದೇಶಗಳಲ್ಲಿ ನಡೆದ ದಾಳಿಗಳ ಹಿಂದೆ ಇದ್ದ ಜಾಲವನ್ನು ಪತ್ತೆಹಚ್ಚಲಾಗಿದೆ. ಕಳೆದ ತಿಂಗಳಲ್ಲಿ ನಡೆದ ಈ ದಾಳಿಗಳಲ್ಲಿ 5 ಸೈನಿಕರು ಮತ್ತು 13 ನಾಗರಿಕರು ಸಾವನ್ನಪ್ಪಿದ್ದರು, ಜೊತೆಗೆ 16 ಉಗ್ರರು ಹತರಾಗಿದ್ದರು. ಇವುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಹಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮುಂದಿನ ಬೆಳವಣಿಗೆಗಳ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.