Bengaluru: ಇನ್ನಷ್ಟು ಸಮಯ ಸಂಚಾರ ದಟ್ಟಣೆಯಲ್ಲಿ ನಿಂತು ಕಾಯಬೇಕೇ? ಯಾವಾಗ ಗ್ರೀನ್ ಸಿಗ್ನಲ್ (Traffic Signal) ಬರುವುದೆಂದು ಭಾವಿಸುತ್ತಿದ್ದೀರಾ? ಈಗ ಅದಕ್ಕೆ ಸುಲಭ ಪರಿಹಾರವಿದೆ. ನಿಮ್ಮ ಮೊಬೈಲ್ ಫೋನ್‌ನಿಂದ ಮುಂದಿನ ಜಂಕ್ಷನ್‌ನ ಟ್ರಾಫಿಕ್ ಸಿಗ್ನಲ್ ಕೌಂಟ್ಡೌನ್ ವೀಕ್ಷಿಸಬಹುದಾಗಿದೆ.
ಬೆಂಗಳೂರಿನ ಸಂಚಾರ ಪೊಲೀಸ್‌ರವರು, ‘ಮ್ಯಾಪಲ್ಸ್’ ನ್ಯಾವಿಗೇಶನ್ ಅಪ್ಲಿಕೇಶನ್ ಸಹಯೋಗದೊಂದಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ, ಸಿಗ್ನಲ್ ಟೈಮರ್ ಅನ್ನು ರಿಯಲ್ ಟೈಮ್‌ನಲ್ಲಿ ಮೊಬೈಲ್‌ನಲ್ಲಿ ನೋಡಬಹುದಾಗಿದೆ.
ಹೇಗೆ ಕಾರ್ಯ ನಿರ್ವಹಿಸುತ್ತದೆ: ಮ್ಯಾಪಲ್ಸ್ ತಾಂತ್ರಿಕ ತಂಡ, ಬೆಂಗಳೂರು ಸಂಚಾರ ಪೊಲೀಸ್ ಮತ್ತು ಅರ್ಕಾಡಿಸ್ ಇಂಡಿಯಾ ತಂಡದ ಸಹಕಾರದಿಂದ ಈ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ವಾಹನ ಸವಾರರು ತಮ್ಮ ಮುಂದಿನ ಸಿಗ್ನಲ್ ಎಷ್ಟು ಸಮಯದಲ್ಲಿ ಬದಲಾಗುತ್ತದೆ ಎಂಬುದನ್ನು ನಿಖರವಾಗಿ ವೀಕ್ಷಿಸಬಹುದು. ಉದಾಹರಣೆಗೆ, ಮುಂದೆ ರೆಡ್ ಸಿಗ್ನಲ್ ಇದ್ದರೆ, ಗ್ರೀನ್ ಆಗಲು ಎಷ್ಟು ನಿಮಿಷ/ಸೆಕೆಂಡ್ಗಳಿವೆ ಎಂಬುದನ್ನು ಮೊಬೈಲ್‌ನಲ್ಲಿ ತಿಳಿದುಕೊಳ್ಳಬಹುದು.
VAC ವ್ಯವಸ್ಥೆ: ಲೈವ್ ಟ್ರಾಫಿಕ್ ಹರಿವನ್ನು ಆಧರಿಸಿ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ ಸಿಗ್ನಲ್ ಅವಧಿಗಳನ್ನು ಹೊಂದಿಸುವ ವೆಹಿಕಲ್ ಆ್ಯಕ್ಚುವೇಟೆಡ್ ಕಂಟ್ರೋಲ್ (VAC) ವ್ಯವಸ್ಥೆ ಬೆಂಗಳೂರಿನ 169 ಜಂಕ್ಷನ್‌ಗಳಲ್ಲಿ ಜಾರಿಯಲ್ಲಿದೆ. ಕೆ.ಆರ್. ಸರ್ಕಲ್, ಹಡ್ಸನ್ ಸರ್ಕಲ್, ಕೆ.ಹೆಚ್. ರಸ್ತೆ, ಮಿನರ್ವ ಜಂಕ್ಷನ್ ಟೌನ್ ಹಾಲ್ ಸೇರಿದಂತೆ ಹಲವು ಸ್ಥಳಗಳಲ್ಲಿ ಇದನ್ನು ಅಳವಡಿಸಲಾಗಿದೆ.
ಈಗ, ಮ್ಯಾಪಲ್ಸ್ ಸಹಯೋಗದೊಂದಿಗೆ, ಎಲ್ಲ ಜಂಕ್ಷನ್‌ಗಳ ನಿಖರವಾದ ಸಿಗ್ನಲ್ ಟೈಮರ್ ಅನ್ನು ವಾಹನ ಸವಾರರು ಮೊಬೈಲ್‌ನಲ್ಲಿ ವೀಕ್ಷಿಸಬಹುದು ಎಂದು ಸಂಚಾರ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.