ದೇಶದ ವಿವಿಧ ನಗರಗಳಲ್ಲಿ ನಿನ್ನೆ ಚಂದ್ರನ ದರ್ಶನವಾಗಿರುವುದರಿಂದ ಇಂದು ಮುಸ್ಲಿಂ ಬಾಂಧವರು ಈದ್-ಉಲ್-ಫಿತರ್ (Eid-ul-Fitr) ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪವಿತ್ರ ರಂಜಾನ್ (Ramzan) ತಿಂಗಳ ಉಪವಾಸದ ನಂತರ, ಈ ಹಬ್ಬದ ಮೂಲಕ ಮುಸ್ಲಿಮರು ಉಪವಾಸಕ್ಕೆ ತೆರೆ ಎಳೆಯುತ್ತಿದ್ದಾರೆ.
ನಿನ್ನೆ ಹೈದರಾಬಾದ್‌ನಲ್ಲಿ ಸದರ್ ಮಜ್ಲಿಸ್-ಎ-ಉಲಮಾ-ಎ-ಡೆಕ್ಕನ್ ಕೇಂದ್ರ ರುಯೆಟ್-ಇ-ಹಿಲಾಲ್ ಸಮಿತಿ ತನ್ನ ಮಾಸಿಕ ಸಭೆ ನಡೆಸಿ, ಶವ್ವಾಲ್ ತಿಂಗಳ ಚಂದ್ರನ ದೃಶ್ಯೀಕರಣದ ಆಧಾರದ ಮೇಲೆ ಈದ್ ದಿನಾಂಕವನ್ನು ಖಚಿತಪಡಿಸಿದೆ. ಲಕ್ನೋ, ದೆಹಲಿ, ಜಮ್ಮು-ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಂದಲೂ ಚಂದ್ರನ ದರ್ಶನದ ವರದಿಗಳು ಬಂದಿವೆ.
ಫತೇಪುರಿ ಮಸೀದಿ ಇಮಾಮ್ ಮುಫ್ತಿ ಮುಕರ್ರಂ ಅಹ್ಮದ್ ಈ ಕುರಿತು, “ನಾವು ಹಲವಾರು ಸ್ಥಳಗಳನ್ನು ಸಂಪರ್ಕಿಸಿದ್ದೇವೆ, ಚಂದ್ರನ ದರ್ಶನದ ಖಚಿತತೆ ಬಂದಿದೆ. ಮಾರ್ಚ್ 31ರಂದು ದೇಶದೆಲ್ಲೆಡೆ ಈದ್ ಆಚರಿಸಲಾಗುವುದು” ಎಂದು ತಿಳಿಸಿದರು. ಈ ಹಬ್ಬ ಸಹೋದರತ್ವ ಮತ್ತು ಸೌಹಾರ್ದತೆ ಸಾರುವ ಸಂದರ್ಭ ಎಂದು ಅವರು ಹುರಿದುಂಬಿಸಿದರು.
ಲಕ್ನೋ ಕೇಂದ್ರ ಚಂದ್ರನ ವೀಕ್ಷಣಾ ಸಮಿತಿಯ ಅಧ್ಯಕ್ಷ ಖಾಲಿದ್ ರಶೀದ್, “ಫರಂಗಿ ನಗರದಲ್ಲಿ ಚಂದ್ರನ ದರ್ಶನವಾಗಿದೆ, ಅದರಿಂದಾಗಿ ಸೋಮವಾರ ಈದ್-ಉಲ್-ಫಿತರ್ ಆಚರಿಸಲಾಗುವುದು” ಎಂದು ಘೋಷಿಸಿದರು. ಲಕ್ನೋ ಈದ್ಗಾದಲ್ಲಿ ಬೆಳಗ್ಗೆ 10 ಗಂಟೆಗೆ ವಿಶೇಷ ನಮಾಜ್ ನಡೆಯಲಿದೆ ಎಂದು ತಿಳಿಸಿದರು.
ಭಾನುವಾರವೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಗರಿಕರಿಗೆ ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳನ್ನು ಕೋರಿದರು. “ಈ ಹಬ್ಬವು ಸಹಾನುಭೂತಿ ಮತ್ತು ದಾನದ ಮಹತ್ವವನ್ನು ಒತ್ತಿಹೇಳುತ್ತದೆ. ಇದು ಶಾಂತಿ, ಪ್ರಗತಿ ಮತ್ತು ಸಂತೋಷವನ್ನು ತರಲಿ. ಭಾರತ ಹಾಗೂ ವಿದೇಶದ ಎಲ್ಲ ಭಾರತೀಯರ, ವಿಶೇಷವಾಗಿ ಮುಸ್ಲಿಂ ಸಹೋದರ-ಸಹೋದರಿಯರ ಜೀವನದಲ್ಲಿ ಈ ಹಬ್ಬ ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸಲಿ” ಎಂದು ಅವರು ಹೇಳಿದರು.
ಈದ್-ಉಲ್-ಫಿತರ್ ಹಬ್ಬವನ್ನು ಪ್ರಪಂಚದಾದ್ಯಂತ ಇಸ್ಲಾಮಿಕ್ ಚಂದ್ರ ಕ್ಯಾಲೆಂಡರ್ ಪ್ರಕಾರ, ಶವ್ವಾಲ್ ತಿಂಗಳ ಆರಂಭವನ್ನು ಸೂಚಿಸುವ ಚಂದ್ರನ ದರ್ಶನದ ಮೇಲೆ ನಿರ್ಧರಿಸಲಾಗುತ್ತದೆ. ಇದರಿಂದಾಗಿ ವಿವಿಧ ದೇಶಗಳಲ್ಲಿ ಈದ್ ವಿಭಿನ್ನ ದಿನಗಳಲ್ಲಿ ಆಚರಿಸಲಾಗುತ್ತದೆ.