Kyiv: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮೊದಲ ಉಪ ಪ್ರಧಾನ ಮಂತ್ರಿಯಾಗಿರುವ ಯೂಲಿಯಾ ಸ್ವೈರಿಡೆಂಕೊ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನಾಮನಿರ್ದೇಶನ ಮಾಡಿದ ಬೆನ್ನಲ್ಲೇ, ಪ್ರಸ್ತುತ ಪ್ರಧಾನಿ ಡೆನಿಸ್ ಶ್ಮಿಹಾಲ್ (Prime Minister Denys Shmyhal) ಅವರು ತಮ್ಮ ರಾಜೀನಾಮೆ ಘೋಷಿಸಿದ್ದಾರೆ.
ಟೆಲಿಗ್ರಾಂನಲ್ಲಿ ಶ್ಮಿಹಾಲ್ ಅವರು ರಾಜೀನಾಮೆ ಪತ್ರದ ಚಿತ್ರವನ್ನು ಹಂಚಿ, ದೇಶಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ. “ರಕ್ಷಣೆಯಲ್ಲಿರುವ ಹೋರಾಟಗಾರರಿಗೆ ಧನ್ಯವಾದಗಳು. ಝೆಲೆನ್ಸ್ಕಿಯವರ ವಿಶ್ವಾಸಕ್ಕೆ ಧನ್ಯವಾದಗಳು. ನಮ್ಮ ದೇಶದ ಸೇವೆಯಲ್ಲಿರುವ ನನ್ನ ಸಂಪೂರ್ಣ ತಂಡಕ್ಕೆ ನನ್ನ ಕೃತಜ್ಞತೆ,” ಎಂದು ಬರೆದುಕೊಂಡಿದ್ದಾರೆ.
ರಷ್ಯಾ ಆಕ್ರಮಣದ ಬೆನ್ನಲ್ಲೇ ಮೂರು ವರ್ಷಗಳಿಗೂ ಹೆಚ್ಚು ಕಾಲ ಉಕ್ರೇನ್ ಪ್ರಧಾನಿಯಾಗಿ ಶ್ಮಿಹಾಲ್ ಸೇವೆ ಸಲ್ಲಿಸುತ್ತಿದ್ದು, ಈ ಬದಲಾವಣೆಯು ರಾಜಕೀಯ ಮಟ್ಟದಲ್ಲಿ ದೊಡ್ಡ ಹೆಜ್ಜೆಯಾಗಿದೆ.
ಹೊಸ ಪ್ರಧಾನಿಯಾಗಲಿರುವ ಯೂಲಿಯಾ ಸ್ವೈರಿಡೆಂಕೊ (ವಯಸ್ಸು 39) ಉಕ್ರೇನ್‌ನ ಮೊದಲ ಮಹಿಳಾ ಆರ್ಥಿಕ ಸಚಿವೆಯಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ವಿವಿಧ ಆರ್ಥಿಕ ಮತ್ತು ರಕ್ಷಣಾತ್ಮಕ ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಮೆರಿಕ-ಉಕ್ರೇನ್ ಖನಿಜ ಒಪ್ಪಂದದ ಮಾತುಕತೆಗಳಲ್ಲಿ ಅವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರು.