ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2025 ಅನ್ನು ಭರ್ಜರಿಯಾಗಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB-Royal Challengers Bangalore) ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ (Shreyanka Patil) ಗಾಯಗೊಂಡ ಕಾರಣ ಈ ಬಾರಿಯ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
RCB ತಂಡದ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯೆಯಾಗಿರುವ ಶ್ರೇಯಾಂಕಾ, ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಅವರು 2024ರ ಮಹಿಳಾ ಟಿ20 ವಿಶ್ವಕಪ್ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಅಲ್ಲದೆ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ವಿರುದ್ಧದ ಸರಣಿಗಳಿಗೂ ಅವರು ಗೈರಾಗಿದ್ದರು.
RCB ತಂಡವು ಶ್ರೇಯಾಂಕಾ ಅವರ ಬದಲಿಗೆ ಅನುಭವಿ ಆಲ್ರೌಂಡರ್ ಸ್ನೇಹ್ ರಾಣಾ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಕಳೆದ ಸೀಸನ್‌ನಲ್ಲಿ ಗುಜರಾತ್ ಜೈಂಟ್ಸ್ ಪರ ಆಡಿದ್ದ ಅವರು ಈ ಬಾರಿ ಯಾವುದೇ ಫ್ರಾಂಚೈಸಿಯಿಂದ ಖರೀದಿಯಾಗಲಿಲ್ಲ. ಆದರೆ RCB ತಂಡದ ಮೊದಲ ಪಂದ್ಯದಲ್ಲಿ ಸ್ನೇಹ್ ರಾಣಾ ಡಗೌಟ್‌ನಲ್ಲಿ ಕಾಣಿಸಿಕೊಂಡಿದ್ದರಿಂದ, ಶ್ರೇಯಾಂಕಾ ಅವರ ಬದಲಿಗೆ ಅವರು ತಂಡಕ್ಕೆ ಸೇರ್ಪಡೆಯಾಗಬಹುದು ಎಂಬ ಊಹಾಪೋಹಗಳು ಶುರುವಾಗಿವೆ.
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಶ್ರೇಯಾಂಕಾ ಪಾಟೀಲ್ ತಮ್ಮ ಎದೆಗುಂದಿದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. “ನಾನು ಮತ್ತೆ ಹಾರುತ್ತೇನೆ” ಎಂಬ ಅರ್ಥದ ಪೋಸ್ಟ್ ಹಾಕಿರುವ ಅವರು, ಶೀಘ್ರವೇ ಕಣಕ್ಕಿಳಿಯಲಿದ್ದಾರೆ ಎಂಬ ವಿಶ್ವಾಸ ಮೂಡಿಸಿದ್ದಾರೆ.