Mysuru: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕುಟುಂಬಸ್ಥರು ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿ ಮಾಡಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
2006ರಲ್ಲಿ ಭೂ ಪರಿವರ್ತನೆ ಆದೇಶ ನೀಡಿದ್ದರೂ, ಪಹಣಿಯಲ್ಲಿ ಮಾಲೀಕರ ಹೆಸರು ಉಲ್ಲೇಖವಾಗಿದೆ. ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲಿ ಭೂಮಿ ದಾಖಲಾಗಿದ್ದು, 2009-10ರಲ್ಲಿ ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬ ದಾಖಲೆಯಿದೆ. ಆದರೆ 13 ವರ್ಷಗಳ ನಂತರ ಇದನ್ನು ಕೈಬಿಡಲಾಗಿದೆ ಎಂಬುದು ಅನುಮಾನಕ್ಕೆ ಗ್ರಾಸವಾಗಿದೆ ಎಂದು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ.
ಮೈಸೂರು ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ 1 ಎಕರೆ ಭೂಮಿ 1983ರಲ್ಲಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದರು. 1996ರಲ್ಲಿ ಈ ಭೂಮಿ ಅಂತಿಮ ಅಧಿಸೂಚನೆಗೆ ಒಳಪಟ್ಟಿದ್ದು, 2006ರಲ್ಲಿ ಕೃಷಿ ಭೂಮಿಯನ್ನು ಅನ್ಯಕ್ರಾಂತ ಮಾಡಲು ಆದೇಶಿಸಲಾಗಿದೆ.
2010ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಈ ಭೂಮಿಯನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ದಾನ ಮಾಡಿದರು. ಒಂದೇ ತಿಂಗಳಲ್ಲಿ ಪಾರ್ವತಿ, ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗೆ ಈ ಭೂಮಿಯನ್ನು ದಾನ ಮಾಡಿದರು. 2011ರ ಮಾರ್ಚ್ 23ರಂದು ಯತೀಂದ್ರ ಈ ಭೂಮಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಒಂದು ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯಗೆ ಮುಡಾ ಹಗರಣ ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ತನಿಖೆ ನಡೆಯುತ್ತಿರುವ ಈ ಪ್ರಕರಣಕ್ಕೆ ಹೊಸ ಬೇನಾಮಿ ಆಸ್ತಿ ಆರೋಪ ಸೇರಿಕೊಂಡಿದೆ.