Bengaluru: ಕರ್ನಾಟಕದಲ್ಲಿ ಅನರ್ಹರಿಗೆ ನೀಡಲಾಗಿದ್ದ BPL ಪಡಿತರ ಕಾರ್ಡ್‌ಗಳನ್ನು (BPL cards) ದೊಡ್ಡ ಮಟ್ಟದಲ್ಲಿ ರದ್ದುಪಡಿಸಲಾಗುತ್ತಿದೆ. ಈಗಾಗಲೇ 3.65 ಲಕ್ಷ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಇನ್ನೂ ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವುದರಿಂದ, ಅವರನ್ನು ಪತ್ತೆ ಮಾಡಿ ತಕ್ಷಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆಹಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ, ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಅರ್ಹರು ಯಾರಾದರೂ ತಪ್ಪಿಹೋಗಿದ್ದರೆ ಅವರಿಗೆ ತಕ್ಷಣ ಕಾರ್ಡ್ ನೀಡಬೇಕು ಎಂದೂ ಸೂಚಿಸಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜೊತೆಗೆ ಪೌಷ್ಟಿಕ ಧಾನ್ಯ ಮತ್ತು ಅಗತ್ಯ ಸಾಮಗ್ರಿಗಳ ಕಿಟ್ ನೀಡುವ ಬಗ್ಗೆ ಪರಿಶೀಲನೆ ನಡೆಯಲಿದೆ. ಆಹಾರ ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ, ಗೋದಾಮುಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮತ್ತು ಪರಿಶಿಷ್ಟ ಜಾತಿ–ಪಂಗಡದವರಿಗೆ ನ್ಯಾಯಬೆಲೆ ಅಂಗಡಿಗಳಿಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದರು.
ಇದೇ ಮೊದಲ ಬಾರಿಗೆ 0.29 ಲಕ್ಷ ಮೆಟ್ರಿಕ್ ಟನ್ ಸಿರಿಧಾನ್ಯವನ್ನು ಖರೀದಿಸಲಾಗುತ್ತಿದೆ. ಖಾಲಿ ಹುದ್ದೆಗಳ ಭರ್ತಿ ಕೂಡ ಶೀಘ್ರವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.