Bengaluru: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಒಳರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ತೆರೆ ಎಳೆದಿದೆ. ಪಕ್ಷದ ಹೈಕಮಾಂಡ್ (high command) ಸ್ಪಷ್ಟವಾಗಿ “ನಾಯಕತ್ವ ಬದಲಾವಣೆ ಇಲ್ಲ” ಎಂಬ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರವಾನಿಸಿದೆ.
ಸಿದ್ದರಾಮಯ್ಯ ಕೂಡ ಗುರುವಾರ, ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಾನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ರಾಹುಲ್ ಗಾಂಧಿಯನ್ನು ಭೇಟಿಯಾಗುವ ಮುನ್ನ ಅವರು ಈ ಮಾತುಗಳನ್ನು ಹೇಳಿದರು. ರಾಹುಲ್ ಗಾಂಧಿಯು ಕೂಡ ರಾಜ್ಯದ ನಾಯಕತ್ವ ಬದಲಾವಣೆಗೆ ಇಚ್ಛೆಪಡುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಹೈಕಮಾಂಡ್‌ನಿಂದ ಸಿದ್ದರಾಮಯ್ಯಗೆ ಮತ್ತೊಂದು ಸಂದೇಶವೂ ಬಂದಿದೆ. ನವಂಬರ್ ಬಳಿಕವೇ ಸಚಿವ ಸಂಪುಟ ಗುಣ ರಚನೆ ಮಾಡಲಾಗುವುದು ಎಂದು ಹೈಕಮಾಂಡ್ ತಿಳಿಸಿದೆ ಎನ್ನಲಾಗಿದೆ.
ಹೈಕಮಾಂಡ್ ಈಗಾಗಲೇ ಸಚಿವರ ಕೆಲಸದ ಪರಿಶೀಲನೆ ಆರಂಭಿಸಿದೆ. ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಎರಡು ಬಾರಿ ಬೆಂಗಳೂರಿಗೆ ಭೇಟಿ ನೀಡಿ ಶಾಸಕರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ.
ಜನರ ಸಮಸ್ಯೆಗಳಿಗೆ ಸ್ಪಂದಿಸದ, ಕೆಲಸದಲ್ಲಿ ತೊಡಗಿಸಿಕೊಳ್ಳದ ಕೆಲ ಸಚಿವರಿಗೆ ನವೆಂಬರ್‌ನಲ್ಲಿ ಪುನರ್ ರಚನೆಯ ವೇಳೆ ಬದಲಾವಣೆ ಸಾಧ್ಯವಿದೆ. ಇನ್ನು ಉಳಿದಿರುವ ನಿಗಮ ಮಂಡಳಿಗಳ ನೇಮಕಾತಿಗೆ ಮಾತ್ರ ತಾತ್ಕಾಲಿಕ ಒಲವು ತೋರಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಹೊಂದಿದ್ದಾರೆ. ಆದರೆ ಸದ್ಯಕ್ಕೆ ಹುದ್ದೆ ಖಾಲಿ ಇಲ್ಲ ಎಂಬುದನ್ನು ಅವರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಭದ್ರವಾಗಿ ಮುಂದಿನ ಐದು ವರ್ಷಗಳು ತಮ್ಮದೇ ನಾಯಕತ್ವ ಎಂದು ಘೋಷಿಸಿದ್ದಾರೆ.