
Sidlaghatta : ಮೂಢನಂಬಿಕೆಗಳ ಹಿಂದೆ ಬೀಳದೇ ವಿಜ್ಞಾನಪರ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನವೇ ಜಗತ್ತಿನ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೊಂದಿದೆ ಎಂದು ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಮಾಯಾಮಂತ್ರ, ಅರ್ಥವಿಲ್ಲದ ಆಚರಣೆಗಳಿಗೆ ಮನುಷ್ಯ ಒಲವು ತೋರಿದರೆ, ಉದ್ಧಾರ ಸಾಧ್ಯವಿಲ್ಲ. ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನದಿಂದ ಕಲಿಯಬೇಕು. ಈ ಶತಮಾನದಲ್ಲಿ ಮಾನವ ತನ್ನದೇ ಆದ ತಂತ್ರಜ್ಞಾನದಿಂದ ತಾನೇ ಅಪಾಯಕ್ಕೊಳಗಾಗುತ್ತಿರುವುದು ವಿಷಾದನೀಯ” ಎಂದರು.
ಡಾಲ್ಫಿನ್ಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮಾತನಾಡಿ, “ಪಿಯುಸಿ ಪ್ರವೇಶ ಬಾಲ್ಯ ಮುಗಿದ ನಂತರದ ಹಂತ. ಪೋಷಕರು ಹೆಚ್ಚು ಎಚ್ಚರಿಕೆಯಿಂದ ಮಕ್ಕಳನ್ನು ಮಾರ್ಗದರ್ಶನ ಮಾಡಬೇಕು. ಪೋಷಕರ ನಿರ್ಲಕ್ಷ್ಯದಿಂದಲೇ ಬಹುತೇಕ ಮಕ್ಕಳು ದಾರಿತಪ್ಪುತ್ತಿದ್ದಾರೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರುವ ಮನೋಬಲ ಬೆಳೆಸಬೇಕು” ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಚಂದನಾ ಅಶೋಕ್ ಮಾತನಾಡಿ, “ಏಕಾಗ್ರತೆ, ದೃಢ ಸಂಕಲ್ಪ ಮತ್ತು ಸತತ ಶ್ರಮ ವಿದ್ಯಾರ್ಥಿಗಳಿಗೆ ಯಶಸ್ಸಿನ ದಾರಿ ತೋರಿಸುತ್ತದೆ. ಡಾಲ್ಫಿನ್ಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನೂ ಕಲಿಸುತ್ತಿದೆ” ಎಂದರು.
“ಪೋಷಕರು ಮಕ್ಕಳಿಗೆ ಪ್ರತಿದಿನ ಅರ್ಧ ಗಂಟೆಯಾದರೂ ನೀಡಿದರೆ ಅವರ ಬೆಳವಣಿಗೆಯಲ್ಲಿ ಸಾಕಷ್ಟು ಬದಲಾವಣೆ ಬರುತ್ತದೆ. ವಿದ್ಯಾರ್ಥಿಯ ಸಾಧನೆ ಎಂದರೆ ತನ್ನ ಗುರಿ ತಲುಪುವುದಷ್ಟೇ ಅಲ್ಲ, ಇತರರನ್ನೂ ಉತ್ತೇಜಿಸುವ ಸಾಮರ್ಥ್ಯ ಹೊಂದಿರಬೇಕು. ಶಿಕ್ಷಣ ಎನ್ನುವುದು ಕೇವಲ ಪಾಠಶಾಲೆಯ ಒಳಗೆ ಸೀಮಿತವಲ್ಲ” ಎಂದು ಅವರು ಹೇಳಿದರು.
CET ಹಾಗೂ JEE ತಜ್ಞ ಡಾ. ರಾಜೇಂದ್ರ ಕುಮಾರ್ ಅವರು, “ಸಾಧಕರೆಲ್ಲರೂ ಶ್ರಮಜೀವಿಗಳೇ. ಆದರೆ ಶ್ರಮಜೀವಿಗಳೆಲ್ಲಾ ಸಾಧಕರಾಗಿರಬೇಕೆಂಬುದಿಲ್ಲ ಎಂಬ ವಾಸ್ತವವನ್ನು ಮರೆತೋದು ಬೇಡ” ಎಂದು ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕ ಹಾಗೂ ಡಾಲ್ಫಿನ್ಸ್ ಸಂಸ್ಥೆಗಳ ಅಧ್ಯಕ್ಷ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಡಾಲ್ಫಿನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್, ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಆರಿಫ್ ಅಹಮದ್, ಸಿ.ಬಿ.ಎಸ್.ಸಿ ಪ್ರಾಂಶುಪಾಲ ಮುನಿಕೃಷ್ಣ, ಪಿಯು ಉಪಪ್ರಾಂಶುಪಾಲ ಎಂ.ಎಚ್. ನಾಗೇಶ್, ದೈಹಿಕ ನಿರ್ದೇಶಕ ಸಂಪತ್ ಸೇರಿದಂತೆ ಸಿಬ್ಬಂದಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.