back to top
21.4 C
Bengaluru
Friday, October 10, 2025
HomeChikkaballapuraSidlaghattaನಮ್ಮ ಭಾಷೆ, ವಿಚಾರ, ನಮ್ಮತನಕ್ಕೆ ದಕ್ಕೆಯಾದಾಗ ಧ್ವನಿ ಎತ್ತುವಂತಾಗಬೇಕು

ನಮ್ಮ ಭಾಷೆ, ವಿಚಾರ, ನಮ್ಮತನಕ್ಕೆ ದಕ್ಕೆಯಾದಾಗ ಧ್ವನಿ ಎತ್ತುವಂತಾಗಬೇಕು

- Advertisement -
- Advertisement -

Sidlaghatta : ನಮ್ಮ ಭಾಷೆ, ನಮ್ಮ ವಿಚಾರಗಳು, ನಮ್ಮತನಕ್ಕೆ ದಕ್ಕೆ ಆದಾಗ ಧ್ವನಿ ಎತ್ತಬೇಕು. ಧ್ವನಿ ಎತ್ತದಿದ್ದಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತೇವೆ, ನಮ್ಮ ನಾಡಿನಲ್ಲಿ ನಾವೇ ಪರಕೀಯರಂತೆ ನಿರಭಿಮಾನದ ಬದುಕನ್ನು ಬದುಕಬೇಕಾಗುತ್ತದೆ ಎಂದು ಸಾಹಿತ್ಯ ಅಕಾಡೆಮಿ ಸದಸ್ಯೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಿಕ್ಕಬಳ್ಳಾಪುರ ಚಕೋರ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಸಾಹಿತ್ಯದಲ್ಲಿ ಸಮ ಸಮಾಜದ ಆಶಯಗಳು” ಮತ್ತು “ಕುವೆಂಪು ಮಂತ್ರ ಮಾಂಗಲ್ಯ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮಿಳು ಚಿತ್ರನಟ ಕಮಲ್ ಹಾಸನ್ ಅವರು ತಮಿಳು ಭಾಷೆಯಿಂದ ಕನ್ನಡ ಹುಟ್ಟಿತು ಎಂದು ನೀಡಿರುವ ಹೇಳಿಕೆಯನ್ನು ಕನ್ನಡ ನಾಡಿನ ಸಾಮಾನ್ಯ ಪ್ರಜೆಗಳಾಗಿ ನಾವು ಒಪ್ಪಲು ಸಾಧ್ಯವಿಲ್ಲ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದೆ. ಎಂಟು ಜ್ಞಾನ ಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಿಕ್ಕ ಹೆಗ್ಗಳಿಕೆ ನಮ್ಮ ಭಾಷೆ, ಸಾಹಿತ್ಯಕ್ಕೆ ಇದೆ ಎಂದರು.

ನಾವು ತಪ್ಪು ಒಪ್ಪುಗಳನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಮತ್ತು ಯುವಜನರು ಹೋರಾಟದ ಮನೋಭಾವವನ್ನು ಕೂಡ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ಅಸಡ್ಡೆಯ ಭಾವ ಒಂದು ಕಾಲದಲ್ಲಿತ್ತು. ಸಂವಿಧಾನದಲ್ಲೂ ನಾವು ಅಪರಾಧಿಗಳೆ ಆಗಿದ್ದೆವು. ಆದರೆ ನಾವು ಅದರ ವಿರುದ್ದ ಹೋರಾಟ ಮಾಡಿದರ ಫಲ ಇಂದು ನಾವು ಕೂಡ ಸಮಾಜದ ಒಂದು ಭಾಗವಾಗಿದ್ದೇವೆ ಎಂದರು.

ನಾನು ಬರೆದ “ಕರುಣೆಗೊಂದು ಸವಾಲು ಅಕ್ಕೈ” ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆಯಲ್ಲದೆ ರಾಜ್ಯದ ಅನೇಕ ವಿಶ್ವ ವಿದ್ಯಾಲಯಗಳು ಅದನ್ನು ಪಠ್ಯವನ್ನಾಗಿ ಅಳವಡಿಸಿಕೊಂಡಿರುವುದಕ್ಕೆ ಸಂತಸವಾಗುತ್ತದೆ ಮತ್ತು ಇದು ಹೋರಾಟಗಾರರಿಗೆ, ಶೋಷಿತರಿಗೆ, ಲೈಂಗಿಕ ಅಲ್ಪ ಸಂಖ್ಯಾತರಿಗೆ ಮಾದರಿಯೂ ಪ್ರೇರಣೆಯೂ ಆಗಲಿ ಎಂದು ಆಶಿಸಿದರು.

ಕನ್ನಡ ಉಪನ್ಯಾಸಕ ಎಂ.ಮುನಿರಾಜು ಮುಖ್ಯ ಭಾಷಣಕಾರರಾಗಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವಾಲ್ಮೀಕಿ ರಾಮಾಯಣದಿಂದ ಹಿಡಿದು ಪಂಪ, ಬಸವಣ್ಣ, ಕನಕದಾಸ, ಸರ್ವಜ್ಞ ಹಾಗೂ ಆದುನಿಕ ಸಾಹಿತ್ಯದ ಕುವೆಂಪು ರವರ ಹಾದಿಯಾಗಿ ಸಮ ಸಮಾಜ ಕುರಿತು ಸಾಹಿತ್ಯದ ಮೂಲಕ ಜಾಗೃತಿಯನ್ನು ಮೂಡಿಸಿರುವುದು ಸಾಹಿತ್ಯ ಕ್ಷೇತ್ರದ ಹೆಮ್ಮೆಯ ವಿಚಾರವಾಗಿದೆ ಎಂದರು.

ಸಮಾಜದಲ್ಲಿ ಇರುವ ಅಸಮಾನತೆಯನ್ನು ಮತ್ತು ಮದುವೆಗಳ ಆಡಂಬೋಲ ನಿವಾರಿಸಲು ಕುವೆಂಪು ರವರು ಸರಳ ಸುಂದರ ಮಂತ್ರ ಮಾಂಗಲ್ಯದ ಮೂಲಕ ಮದುವೆ ಆಗಬೇಕೆಂದು ಅವರು ನೀಡಿರುವ ಮಾರ್ಗ ಇಂದಿಗೂ ಆದರ್ಶವಾಗಿದೆ ಎಂದು ಹೇಳಿದರು.

ಆ ಮೂಲಕ ಮೌಡ್ಯ, ಮೂಡ ನಂಬಿಕೆ, ಅಂಧಾಚಾರಗಳಿಗೆ ಮನಸೋಲದೆ ಜಾತಿ, ಮತ, ಧರ್ಮ, ಭಾಷೆ, ದೇಶ ಯಾವುದರ ಹಂಗಿಲ್ಲದೆ ನಡೆಸಲು ಕುವೆಂಪು ಮಂತ್ರ ಮಾಗಲ್ಯ ಮಾದರಿ ಆಗಿದೆ. ಆ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಆಳವಡಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕೆ ಮಾದರಿಯಾಗಬೇಕೆಂದು ತಿಳಿಸಿದರು.

ಕನ್ನಡ ಶಿಕ್ಷಕ ವಿ.ನಾರಾಯಣಸ್ವಾಮಿ ಅವರು ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ಎನ್.ಶ್ರೀನಿವಾಸಮೂರ್ತಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್.ವಿ.ನಾಗರಾಜ ರಾವ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಕನ್ನಡ ಕಸ್ತೂರಿ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಪಾತಮುತ್ತಕಹಳ್ಳಿ ಮು.ಚಲಪತಿಗೌಡ, ಈ ಧರೆ ಪ್ರಕಾಶ್ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page