back to top
24 C
Bengaluru
Friday, July 25, 2025
HomeChikkaballapuraSidlaghatta1,200 ವರ್ಷಗಳಷ್ಟು ಹಿಂದಿನ ಶಾಸನ ಸಹಿತ ವೀರಗಲ್ಲುಗಳು ಪತ್ತೆ

1,200 ವರ್ಷಗಳಷ್ಟು ಹಿಂದಿನ ಶಾಸನ ಸಹಿತ ವೀರಗಲ್ಲುಗಳು ಪತ್ತೆ

- Advertisement -
- Advertisement -

Gajjiganahalli, Sidlaghatta : ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ತಂಡ 1,200 ವರ್ಷಗಳಷ್ಟು ಹಿಂದಿನ ಗಂಗರ ಕಾಲದ ಅಪ್ರಕಟಿತ ಶಾಸನ ಸಹಿತ ವೀರಗಲ್ಲುಗಳನ್ನು ತಾಲ್ಲೂಕಿನ ಕೊತ್ತನೂರು ಮತ್ತು ಗೆಜ್ಜಿಗಾನಹಳ್ಳಿಗಳಲ್ಲಿ ಪತ್ತೆ ಹಚ್ಚಿದ್ದಾರೆ.

ಕೊತ್ತನೂರು ಗ್ರಾಮದ ರೈತ ಕೆ.ಎಂ.ಮೂರ್ತಿ ಅವರ ಮಾವಿನ ತೋಪಿನ ಬಳಿ ಶಾಸನ ಮತ್ತು ವೀರಗಲ್ಲುಗಳನ್ನು ಶೋಧಿಸಿದ್ದಾರೆ. ಶಾಸನದ ಲಿಪಿ ಹಳಗನ್ನಡದ್ದಾಗಿದೆ. ಅದರ ಲಿಪಿಯ ಶೈಲಿಯಿಂದ ಇದು ಗಂಗರ ಕಾಲದ್ದೆಂದು ಹೇಳಬಹುದಾಗಿದೆ. ಈ ಹಳಗನ್ನಡ ಶಾಸನದಲ್ಲಿ “ ಸ್ವಸ್ತಿಶ್ರೀ ಕೊತ್ತನ್ನರ್ … “ ಎಂದು ಪ್ರಾರಂಭವಾಗುವ ವಾಕ್ಯದಲ್ಲಿ ಗ್ರಾಮದ ಹೆಸರು ಕೊತ್ತನೂರು ಎಂಬ ಪದವು, ಈ ಗ್ರಾಮದ ಇತಿಹಾಸವನ್ನು 1,200 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದರು.

ಕೊತ್ತನೂರಿನಲ್ಲಿ ಸಿಕ್ಕ ವೀರಗಲ್ಲಿನಲ್ಲಿ ವೀರನು ವೀರಾಸನದಲ್ಲಿ ನಿಂತಿದ್ದು, ಒಂದು ಕೈಯಲ್ಲಿ ಬಾಕುವನ್ನು ಹಿಡಿದಿದ್ದು, ಮತ್ತೊಂದು ಕೈಯಲ್ಲಿ ಬಿಲ್ಲನ್ನು ಹಿಡಿದಿರುವನು. ಆತನ ಹೊಟ್ಟೆ ಮತ್ತು ಭುಜಕ್ಕೆ ಎರಡು ಬಾಣಗಳು ನೆಟ್ಟಿರುವುದನ್ನು ಚಿತ್ರಿಸಲಾಗಿದೆ.

Sidlaghatta Gajjiganahalli Ganga Dynasty Hero stones discovered

ತಾಲ್ಲೂಕಿನ ಗೆಜ್ಜಿಗಾನಹಳ್ಳಿಯಲ್ಲಿ ಆರು ಶಾಸನ ಮತ್ತು ವೀರಗಲ್ಲುಗಳು ಪತ್ತೆಯಾಗಿವೆ. ಅದರಲ್ಲಿನ ಒಂದು ಶಾಸನಸಹಿತ ವೀರಗಲ್ಲಿನಲ್ಲಿ ತನ್ನ ಗ್ರಾಮಕ್ಕೆ ವೈರಿಗಳು ನುಗ್ಗಿ ಗೋವುಗಳನ್ನು ಅಪಹರಿಸಲು ಪ್ರಯತ್ನಿಸಿದಾಗ ವೀರನ್ನು ಹೋರಾಡಿ ಮಡಿದಿದ್ದಾನೆ ಎಂಬ ಸಂಗತಿಯನ್ನು ಹಳಗನ್ನಡದ ಲಿಪಿಯಲ್ಲಿ ಬರೆಯಲಾಗಿದೆ. ವೀರನ ಕುರಿತಾದ ಈ ವೀರಗಲ್ಲನ್ನು ಈ ಪ್ರಾಂತ್ಯದ ಮುಖಂಡ ಹಾಕಿಸಿರುವುದಾಗಿ ಬರೆದಿರುವರು. ವೀರನು ಹೋರಾಡುವಾಗ ವೈರಿಗಳ ರುಂಡವನ್ನು ಕತ್ತರಿಸುವುದನ್ನು ಶಿಲ್ಪಿ ಸುಂದರವಾಗಿ ಕೆತ್ತಿರುವನು.

“ಗೆಜ್ಜಿಗಾನಹಳ್ಳಿಯಲ್ಲಿ ನಾವು ಐತಿಹಾಸಿಕ ಮಹತ್ವದ ಆರು ಶಾಸನ ಮತ್ತು ವೀರಗಲ್ಲುಗಳನ್ನು ನೋಡಿದೆವು. ಇವು ಅಸ್ತವ್ಯಸ್ತವಾಗಿ ಅಲ್ಲಲ್ಲಿ ಬಿದ್ದಿವೆ. ಇವುಗಳನ್ನು ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿಯವರು ಸಂರಕ್ಷಿಸಬೇಕು” ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದರು.

ಈ ಸಂದರ್ಭದಲ್ಲಿ ಇತಿಹಾಸ ಸಂಶೋಧಕ ಡಾ.ವಿಜಯಶಂಕರ್, ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ರೈತರಾದ ಮೂರ್ತಿ, ರಾಜಣ್ಣ, ವೆಂಕಟರೆಡ್ಡಿ ಇದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page